ಕಡಬ, ಜೂ 03 (DaijiworldNews/MS): ಕಡಬ ಮೆಸ್ಕಾಂನ ಲೈನ್ಮನ್ ದ್ಯಾಮಣ್ಣ ದೊಡ್ಡಮನಿ (26) ಅವರು ಕರ್ತವ್ಯದಲ್ಲಿದ್ದ ವೇಳೆ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ಕಡಬ ಮೆಸ್ಕಾಂ ಉಪ ವಿಭಾಗದ ಇಬ್ಬರು ಎಂಜಿನಿಯರ್ಗಳ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ಯಾಮಣ್ಣ ದೊಡ್ಡಮನಿ ಅವರ ತಂದೆ ರೇವಣ್ಣಪ್ಪ ಅವರು ಮೆಸ್ಕಾಂ ಕಡಬ ಉಪ ವಿಭಾಗದ ಸಹಾಯಕ ಎಂಜಿನಿಯರ್ ಸತ್ಯನಾರಾಯಣ ಕೆ.ಸಿ. ಹಾಗೂ ಕಿರಿಯ ಎಂಜಿನಿಯರ್ ವಸಂತ ವಿರುದ್ಧ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪುತ್ರ ದ್ಯಾಮಣ್ಣ ಮೆಸ್ಕಾಂ ಕಡಬ ಶಾಖೆಯಲ್ಲಿ ಹಿರಿಯ ಮಾರ್ಗದಾಳು ಆಗಿದ್ದು, ಮೇ 31ರಂದು ರಾತ್ರಿ ವಿಪರೀತ ಮಳೆ ಸುರಿದ ಕಾರಣ ವಿದ್ಯುತ್ ಸಂಪರ್ಕ ವ್ಯತ್ಯಯವಾಗಿತ್ತು. ಅದರ ದುರಸ್ತಿಗಾಗಿ ಜೂ. 1ರಂದು ಕುಟ್ರಾಪ್ಪಾಡಿ ಗ್ರಾಮದ ತಲೆಕ್ಕಿ ಸಮೀಪದ ಮುಳಿಮಜಲು ಎಂಬಲ್ಲಿ ಕಂಬ ಏರಿದ್ದಾಗ ಹಠಾತ್ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುತ್ತಾನೆ. ಆತ ದುರಸ್ತಿ ಮಾಡುತ್ತಿದ್ದ ಸ್ಥಳದಲ್ಲಿ ಎರಡು ಟ್ರಾನ್ಸ್ ಫಾರ್ಮರ್ಗಳ ಎರಡು ವಿದ್ಯುತ್ ಲೈನ್ಗಳು ಹಾದು ಹೋಗಿವೆ. ಒಂದನ್ನು ಆಫ್ ಮಾಡಿದ್ದು, ಮತ್ತೂಂದು ಲೈನ್ನಲ್ಲಿ ವಿದ್ಯುತ್ ಪ್ರವಹಿಸಿರುವುದರಿಂದ ಆತನಿಗೆ ವಿದ್ಯುತ್ ಆಘಾತವಾಗಿದೆ. ದುರಸ್ತಿ ಸಂದರ್ಭ ಆತನ ಜತೆಗೆ ಹಿರಿಯ ಅಧಿಕಾರಿಗಳು ಹೋಗದಿರುವುದು, ಸಹಾಯಕ್ಕೆ ಯಾರನ್ನೂ ಕಳುಹಿಸದಿದ್ದುದು, ಸುರಕ್ಷೆಗಾಗಿ ಹೆಲ್ಮೆಟ್, ಹ್ಯಾಂಡ್ ಗ್ಲೌಸ್, ಶೂ ಮುಂತಾದ ಯಾವುದೇ ಸುರಕ್ಷಾ ಸಾಮಗ್ರಿಗಳನ್ನು ನೀಡದೆ ಕಳುಹಿಸಿ ನಿರ್ಲಕ್ಷ್ಯ ತೋರಿದ್ದಾರೆ. ಆದ್ದರಿಂದ ಅವಘಡಕ್ಕೆ ಹಿರಿಯ ಅಧಿಕಾರಿಗಳೇ ಕಾರಣರಾಗಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.