ಮಂಗಳೂರು, ಜೂ 02 (DaijiworldNews/SM): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಘೋಷಣೆ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಸರಕಾರ ಗ್ಯಾರಂಟಿ ಘೋಷಣೆ ಮಾಡಿದೆ. ಜನಾಕ್ರೋಶದ ಬಳಿಕ ತಡವಾಗಿ ಘೋಷಣೆ ಮಾಡಿದ್ದಾರೆ. ಜನಪರ ಯೋಜನೆ ಘೋಷಣೆ ಮಾಡಿದ್ದಾರೆ, ಇದನ್ನು ಸ್ವಾಗತಿಸ್ತೇನೆ ಎಂದರು. ಆದರೆ ಇದಕ್ಕೆ ಹಣದ ಮೂಲ, ಹಣದ ಕ್ರೋಡೀಕರಣ, ಎಷ್ಟು ವರ್ಷ ಇರುತ್ತೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್ಸು ಪ್ರಯಾಣಿಕರಿಗೆ ಏನು ಕೊಡುಗೆ ಇದೆ? ರಾಜ್ಯದ ಬೊಕ್ಕಸದ ಹಣದ ಗತಿ ಏನು? ಯಾರಿಗೂ ಹೊರೆ ಆಗದೇ ಹೇಗೆ ನಿಯಂತ್ರಿಸ್ತೀರಾ? ನಮ್ಮದು ಶ್ರೀಲಂಕಾ, ಪಾಕಿಸ್ತಾನದಂತೆ ಆರ್ಥಿಕ ಕುಸಿತ ಆಗಬಾರದು. ಆದಾಯದ ಮೂಲಗಳನ್ನು ಶ್ವೇತಪತ್ರದ ಮೂಲಕ ಹೊರಡಿಸಲಿ. ಜನರಿಗೆ ಹೊರೆಯಾಗದಂತೆ ಈ ಯೋಜನೆ ಜಾರಿಯಾಗಲಿ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.