ಕುಂದಾಪುರ, ಜೂ 02 (DaijiworldNews/SM): ಕೋಟ್ಯಂತರ ರೂಪಾಯಿ ವ್ಯಯಿಸಿದ ಕೊಲ್ಲೂರು ಒಳಚರಂಡಿ ಹಾಗೂ ಕುಡಿಯುವ ನೀರಿನ ಸರಬರಾಜು ಯೋಜನೆಯ ಕಳಪೆ ಕಾಮಗಾರಿಯ ಪರಿಣಾಮ ಸುತ್ತಮುತ್ತಲಿನ ಗ್ರಾಮಸ್ಥರು ಕುಡಿಯಲು ಬಳಸುವ ನೀರು ಕಲುಷಿತಗೊಂಡು ಕುಡಿಯುವ ನೀರಿಗೆ ಹಾಹಾಕಾರವೆದ್ದಿದೆ.
ಯು.ಜಿ.ಡಿ. ಕಳಪೆ ಕಾಮಗಾರಿಯಿಂದಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸಮೀಪದ ಅಗ್ನಿ ತೀರ್ಥವೂ ಕಲುಷಿತಗೊಂಡಿದೆ. ಪರಿಣಾಮವಾಗಿ ಸ್ಥಳೀಯ ವಾಸಿಗಳ ಕುಡಿಯುವ ನೀರಿನ ಬಾವಿಗಳಿಗೂ ಕಲುಷಿತ ನೀರು ನುಗ್ಗಿದ್ದು, ಕುಡಿಯುವುದು ಬಿಡಿ, ಇತರ ಕೆಲಸಗಳಿಗೂ ಅಯೋಗ್ಯವಾಗಿದೆ.
ಈ ಬಗ್ಗೆ ಇಲ್ಲಿನ ನಿವಾಸಿಗಳಾದ ಕಿರಣ್ ಕುಮಾರ್, ಚಂದ್ರ, ಗಿರಿಜಾ, ಜಲಜಾ ಮೊದಲಾದವರು ಸ್ಥಳೀಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
ಇನ್ನಾದರೂ ಸಂಬಂಧಪಟ್ಟವರು ತಕ್ಷಣ ಸ್ಪಂದಿಸಿ ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಬೇಕಿದೆ. ಇಲ್ಲದೇ ಇದ್ದರೆ ಸಂಬಂಧಪಟ್ಟ ಅಧಿಕಾರಿಗಳ ಕಚೇರಿ ಮುಂದೆ ನೀರಿಗಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರ ಪರವಾಗಿ ವಿನಾಯಕ ಆಚಾರ್ಯ ಕಾಶಿಹೊಳೆ ಎಚ್ಚರಿಸಿದ್ದಾರೆ