ಉಳ್ಳಾಲ,ಜೂ 02 (DaijiworldNews/MS): ಮಂಗಳೂರಿನ ಸೋಮೇಶ್ವರ ಬೀಚ್ ನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ತಲಪಾಡಿ ನಿವಾಸಿ ಅಖಿಲ್ ಎಂಬಾತನನ್ನು ಬಂಧಿಸಲಾಗಿದೆ. ಈವರೆಗೆ ನೈತಿಕ ಪೊಲೀಸ್ ಗಿರಿ ಕೇಸ್ ನಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.ಅಪ್ರಾಪ್ತ ಸೇರಿ ಈವರೆಗೆ ಐವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬಸ್ತಿಪಡ್ಪು ನಿವಾಸಿ ಯತೀಶ್, ತಲಪಾಡಿ ನಿವಾಸಿಗಳಾದ ಸಚಿನ್ ಮತ್ತು ಸುಹಾನ್, ಅಖಿಲ್ ಸೇರಿ ಓರ್ವ ಅಪ್ರಾಪ್ತ ಬಂಧಿಸಲಾಗಿದೆ.
ಐಪಿಸಿ 307 ಹಾಗೂ ಗಲಭೆ ಸೃಷ್ಟಿ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿದೆ. ಮತ್ತಷ್ಟು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಮೂರು ಪ್ರತ್ಯೇಕ ತಂಡದಿಂದ ತನಿಖೆ ಮುಂದುವರಿಸಲಾಗಿದೆ.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳ ದೂರಿನಡಿ ಎಫ್ಐಆರ್ ದಾಖಲಾಗಿತ್ತು.ಅದರಂತೆ ಹಿಂದೂ ಸಂಘಟನೆಗೆ ಸೇರಿದ ಐವರು ಆರೋಪಿಗಳನ್ನು ಈವರೆಗೆ ಬಂಧಿಸಲಾಗಿದೆ.
ಕಮೀಷನರ್ ಭೇಟಿ:
ಉಳ್ಳಾಲ ಪೊಲೀಸ್ ಠಾಣೆಗೆ ಮಂಗಳೂರು ಕಮಿಷನ್ ಕುಲದೀಪ್ ಜೈನ್ ಭೇಟಿ ನೀಡಿದರು. ಸಿಸಿಬಿ ಎಸಿಪಿ ಪಿ.ಎ ಹೆಗ್ಡೆ ಹಾಗೂ ಉಳ್ಳಾಲ ಇನ್ಸ್ಪೆಕ್ಟರ್ ರಿಂದ ಕಮಿಷನರ್ ಮಾಹಿತಿ ಪಡೆದರು.ಪ್ರಕರಣ ಗಂಭೀರತೆ ಪಡೆದ ಹಿನ್ನೆಲೆ ಕಮಿಷನರ್ ಠಾಣೆಗೆ ಭೇಟಿ ನೀಡಿದರು. ಮೂರು ಪೊಲೀಸ್ ತಂಡಗಳಿಗೆ ತನಿಖೆ ನಡೆಸುವಂತೆ ಸೂಚಿಸಿದ ಕಮಿಷನರ್ ಉಳಿದ ಆರೋಪಿಗಳ ಶೀಘ್ರ ಪತ್ತೆಗೆ ಆದೇಶಿಸಿದ್ದಾರೆ.
ಬಿಜೆಪಿ- ಹಿಂದು ನಾಯಕರಿಂದ ಠಾಣೆಗೆ ಭೇಟಿ
ಅಮಾಯಕರ ಬಂಧನ ಆರೋಪಿಸಿ ಉಳ್ಳಾಲ ಠಾಣೆಗೆ ಬಿಜೆಪಿ ಹಾಗೂ ಹಿಂದೂ ನಾಯಕರು ಭೇಟಿ ನೀಡಿದರು.ಉಳ್ಳಾಲ ಠಾಣೆಗೆ ಆಗಮಿಸಿದ ಬಿಜೆಪಿ ನಾಯಕ ಸತೀಶ್ ಕುಂಪಲ ಹಾಗೂ ವಿಎಚ್ ಪಿ, ಭಜರಂಗದಳ ಪ್ರಮುಖರು ಕಮಿಷನರ್ ಕುಲದೀಪ್ ಜೈನ್ ಭೇಟಿಯಾದರು. ಹಲವು ಅಮಾಯಕ ಹಿಂದೂ ಯುವಕರ ಬಂಧಿಸಲಾಗಿದೆ. ತಕ್ಷಣ ಅಮಾಯಕರ ಬಿಡುಗಡೆಗೆ ಮಾಡಬೇಕು ಎಂದು ಹಿಂದೂ ನಾಯಕರು ಒತ್ತಾಯಿಸಿದರು. ಪ್ರಕರಣದ ಆರೋಪಿಗಳನ್ನಷ್ಟೇ ಬಂಧಿಸುವ ಭರವಸೆ ನೀಡಿದ ಕಮಿಷನರ್ ಕುಲದೀಪ್ ಜೈನ್ ವಶಕ್ಕೆ ಪಡೆದವರು ಕೇಸ್ ನಲ್ಲಿ ಇಲ್ಲದಿದ್ದರೆ ಬಿಡುಗಡೆ ಮಾಡುವ ಭರವಸೆ ನೀಡಿದರು.
ಕಮಿಷನರ್ ಭೇಟಿ ಬಳಿಕ ಬಿಜೆಪಿ ಮುಖಂಡ ಸತೀಶ್ ಕುಂಪಲ ಮಾಧ್ಯಮಗಳ ಜತೆ ಮಾತನಾಡಿ ಕಾಂಗ್ರೆಸ್ ಸರ್ಕಾರ ಬಂದ ಬೆನ್ನಲ್ಲೇ ಉಳ್ಳಾಲದಲ್ಲಿ ಅಹಿತಕರ ಘಟನೆ ನಡೆದಿದೆ. ಕಾಲೇಜಿನ ಅನ್ಯಕೋಮಿನ ವಿದ್ಯಾರ್ಥಿಗಳು ಸೋಮೇಶ್ವರ ಬೀಚ್ ಗೆ ಬಂದಿದ್ದಾರೆ. ಪರಮಪವಿತ್ರ ಕ್ಷೇತ್ರದಲ್ಲಿ ಅಶ್ಲೀಲವಾಗಿ ವರ್ತಿಸಿದಾಗ ಸ್ಥಳೀಯ ಯುವಕರು ಪ್ರಶ್ನೆ ಮಾಡಿದ್ದಾರೆ. ಇದು ತಪ್ಪಾದರೂ ದೇವರ ಕ್ಷೇತ್ರದ ಬಳಿ ಅಶ್ಲೀಲ ವರ್ತನೆ ಕಂಡು ಆಕ್ರೋಶ ಸಹಜ. ಏನೇ ಆದರೂ ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸಲಿ.ಇಂತಹ ಘಟನೆಗಳಿಗೆ ಆಸ್ಪದ ನೀಡುವುದು ಬೇಡ ಅಮಾಯಕರ ಬಂಧನ ಸರಿಯಲ್ಲ, ಅಮಾಯಕರನ್ನ ಬಿಡುತ್ತೇವೆ ಅಂದಿದ್ದಾರೆ.ಯುವಕರು ನಮ್ಮ ಕಾರ್ಯಕರ್ತರಾ ಅಥವಾ ಅಲ್ಲವಾ ಅನ್ನೋದು ಪ್ರಶ್ನೆ ಅಲ್ಲ. ಅವರ ಕುಟುಂಬದವರು ಬಂದು ಹೇಳಿದಾಗ ನಾವು ಠಾಣೆಗೆ ಬಂದಿದ್ದೇವೆ. ಎಲ್ಲಾ ವೈದ್ಯಕೀಯ ಕಾಲೇಜುಗಳ ಪ್ರಮುಖರ ಜತೆಗೆ ಮಾತನಾಡಿ ವಿದ್ಯಾರ್ಥಿಗಳಿಗೆ ಬುದ್ಧಿಮಾತು ಹೇಳುವ ಪ್ರಯತ್ನ ಮಾಡುತ್ತೇನೆ ಎಂದರು.