ಕುಂದಾಪುರ, ಜೂ 02 (DaijiworldNews/MS): ಎರಡು ಮೂರು ದಿನಗಳ ಹಿಂದಷ್ಟೇ ಹುಟ್ಟಿರಬಹುದೆನ್ನಲಾದ ಸುಮಾರು 12 ಗಂಡುಕರುಗಳನ್ನು ನಿಷ್ಕರುಣೆಯಿಂದ ಕಾಡಿನ ಮಧ್ಯೆ ಬಿಟ್ಟು ಹೋದ ಹೃದಯ ವಿದ್ರಾವಕ ಘಟನೆ ಹೇರೂರು ಗ್ರಾಮದ ಯರುಕೋಣೆ ಸಮೀಪದ ಆಲ್ ಗೆದ್ದಕೇರಿಯಲ್ಲಿ ಬುಧವಾರ ಬೆಳಕಿಗೆ ಬಂದಿದೆ. ಹೈಬ್ರಿಡ್ ಜಾತಿಯ ಕರುಗಳಾಗಿದ್ದು ಎಲ್ಲವೂ ಗಂಡುಕರುಗಳಾಗಿದ್ದು, ಯಾರೋ ಅಪರಿಚಿತರು ವಾಹನದಲ್ಲಿ ತಂದು ಯರುಕೋಣೆ ಸಮೀಪದ ಆಲಗೆದ್ದಕೇರಿಯ ಕಲ್ಲುಪಾರಿಗಳ ಮಧ್ಯೆ ಬಿಟ್ಟು ಹೋಗಿದ್ದಾರೆ.
ಸ್ಥಳೀಯ ನಿವಾಸಿ ಶಿಕ್ಷಕ ಜಯಪ್ರಕಾಶ ಶೆಟ್ಟಿ ಅವರು ಶಾಲೆಯಿಂದ ಮನೆಗೆ ಬರುವ ಸಮಯದಲ್ಲಿ ಗಂಡು ಕರುಗಳ ಕೂಗಾಟ ಕೇಳಿಸಿದ್ದು ಕಲ್ಲುಪಾರೆಗಳ ಒಳಗೆ ಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಈ ಪೈಕಿ ಎರಡು ಕರುಗಳು ನೀರು ಆಹಾರವಿಲ್ಲದೆ ಸಾವನ್ನಪ್ಪಿದರೆ ಕೆಲವು ಕರುಗಳು ಹಸಿವಿನಿಂದ ನಿತ್ರಾಣ ಗೊಂಡಿವೆ. ಸ್ಥಳೀಯರು ನೀರು ಕುಡಿಸಿ, ಹುಲ್ಲು ನೀಡಿ ಉಪಚರಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೈಂದೂರು ಪಶುವೈದ್ಯಾಧಿಕಾರಿಗೆ ಮಾಹಿತಿ ನೀಡಿದರು.
10ರಿಂದ 12 ಕರುಗಳನ್ನು ಬಿಟ್ಟು ಹೋಗಿರುವುದಾಗಿ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, 5 ಕರುಗಳು ಕಲ್ಲುಪಾರೆಗಳ ಮಧ್ಯೆ ಸಿಕ್ಕಿದ್ದು, ಇನ್ನುಳಿದ ಕರುಗಳಿಗೆ ಹುಡುಕಾಟ ನಡೆಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಸಧ್ಯ ಸ್ಥಳೀಯರಾದ ನಾಗೇಶ್ ಯರುಕೋಣೆ ಅವರು ಮನೆಯಲ್ಲಿ ಕರುಗಳಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಜನಪ್ರತಿನಿಧಿಗಳು ಕರುಗಳನ್ನು ಗೋಶಾಲೆಗೆ ಕಳುಹಿಸಲು ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. ಶಿಕ್ಷಕ ಜಯಪ್ರಕಾಶ ಶೆಟ್ಟಿ, ಸುಧಾಕರ ಪೂಜಾರಿ, ನಾಗೇಶ್, ರಕ್ಷಿತ್, ಮಂಜುನಾಥ ಸಹಾಯ ಮಾಡಿದ್ದಾರೆ