ಕುಂದಾಪುರ, ಜೂ 01 (DaijiworldNews/SM): ಮಳೆಗಾಲ ಬಂತೆಂದರೆ ಕಾಲುಸಂಕಗಳ ಭಯ ಆರಂಭವಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಪ್ರತೀವರ್ಷವೂ ಕೂಡಾ ಕಾಲುಸಂಕದಿಂದ ಅವಘಡಗಳು ಸಂಭವಿಸುತ್ತಲೇ ಇರುತ್ತದೆ. ನಮ್ಮ ವ್ಯವಸ್ಥೆ ಅವಘಡ ಸಂಭವಿಸುವ ತನಕ ಎಚ್ಚೆತ್ತುಕೊಳ್ಳುವುದಿಲ್ಲ. ಯಾವುದಾದರೂ ಅನಾಹುತ ಸಂಭವಿಸಿದ ಬಳಿಕ ಒಂದಿಷ್ಟು ದಿನ ಸಂಚಲನ ಇರುತ್ತದೆ. ಮತ್ತದೆ ಯಥಾಸ್ಥಿತಿ. ಅದಕ್ಕೊಂದು ಉದಾಹರಣೆ ಯಡಮೊಗೆಯಲ್ಲಿ ಇನ್ನೂ ಕೂಡಾ ಅಪಾಯವನ್ನು ಆಹ್ವಾನಿಸುತ್ತಿರುವ ರಾಂಪಯ್ಯ ಜಡ್ಡು ಕಾಲುಸಂಕ.
ಬೈಂದೂರು ವಿಧಾನಸಭಾ ಕ್ಷೇತ್ರದ ಯಡಮೊಗೆಯ ಮುಖ್ಯರಸ್ತೆಯಿಂದ ಕೂಗಳತೆಯ ದೂರದಲ್ಲಿ ರಾಂಪಯ್ಯ ಜಡ್ಡು ಎನ್ನುವ ಹಳ್ಳಿಯಿದೆ. ಇಲ್ಲಿ ಸುಮಾರು 20-25 ಮನೆಗಳಿವೆ. ಇಲ್ಲಿ ಅಡ್ಡವಾಗಿ ಕುಬ್ಜ ನದಿ ಕಮಲಶಿಲೆಯತ್ತ ಹರಿದು ಹೋಗುತ್ತದೆ. ನದಿಯ ಬಲಭಾಗದಲ್ಲಿ ಇರುವ ರಾಂಪಯ್ಯ ಜಡ್ಡುವಿಗೆ ಇನ್ನೂ ಕೂಡಾ ಸಂಪರ್ಕಕ್ಕೆ ಕಿರು ಸೇತುವೆ ನಿರ್ಮಾಣವಾಗಿಲ್ಲ. ನೂರಾರು ವರ್ಷಗಳಿಂದ ಇಲ್ಲಿನ ಜನ ತಾವೇ ನದಿಗೆ ಅಡ್ಡವಾಗಿ ತಾತ್ಕಾಲಿಕ ಮರದ ಕಾಲು ಸಂಕ ನಿರ್ಮಾಣ ಮಾಡಿಕೊಂಡು ನದಿ ದಾಟುತ್ತಾರೆ. ಪಶ್ಚಿಮಘಟ್ಟ ಪ್ರದೇಶದಿಂದ ರಭಸವಾಗಿ ಹರಿದು ಬರುವ ಕುಬ್ಜ ನದಿ ಮಳೆಗಾಲದಲ್ಲಿ ರುದ್ರಭಯಂಕರವಾಗಿ ಹರಿಯುತ್ತದೆ. ಸುಮಾರು 50 ಅಡಿಗಳಿಗೂ ಅಗಲವಿರುವ ನದಿಗೆ ಸ್ಥಳೀಯ ಗ್ರಾಮಸ್ಥರೇ ಸೇರಿ ಮರದ ಕಾಲುಸಂಕ ನಿರ್ಮಾಣ ಮಾಡಿಕೊಳ್ಳುತ್ತಾರೆ. ಅಡಿಕೆಮರದ ತುಂಡುಗಳನ್ನು ಉದ್ದಕ್ಕೆ ಮೂರು ಹಂತಗಳಲ್ಲಿ ಹಾಕಿ ಅದಕ್ಕೆ ಅಡ್ಡವಾಗಿ ಮರದ ಸಲಕೆಗಳನ್ನು ಇಟ್ಟು ಹಗ್ಗದಿಂದ ಬಿಗಿಯುತ್ತಾರೆ. ಎರಡು ಕಡೆ ಅಡಿಕೆ ದಬ್ಬೆಯಿಂದ ಗಾರ್ಡ್ನಂತೆ ಕಟ್ಟುತ್ತಾರೆ. ಸುಮಾರು 30 ಅಡಿಗಳಷ್ಟು ಆಳ ಇದ್ದರೆ, ಉದ್ದ ಸುಮಾರು 50 ಅಡಿಗೂ ಹೆಚ್ಚು ಇರುತ್ತದೆ.
ರಾಂಪಯ್ಯ ಜಡ್ಡುವಿನ ಮಕ್ಕಳು ಯಡಮೊಗೆಯ ಶಾಲೆಗೆ ಈ ಕಾಲುಸಂಕವನ್ನು ದಾಟಿಯೇ ಹೋಗಬೇಕು. ಅನಾರೋಗ್ಯ ಕಾಣಿಸಿಕೊಂಡರೂ ಈ ಕಾಲುಸಂಕದ ಮೂಲಕವೇ ಹೊಳೆ ದಾಟಬೇಕು. ದೈನಂದಿನ ಪರಿಕರ, ದಿನಸಿ ಸಾಮಾನುಗಳನ್ನು ಈ ಮಾರ್ಗದಲ್ಲಿಯೇ ತರಬೇಕು. ಮಳೆಗಾಲದ ನಾಲ್ಕು ತಿಂಗಳು ಶತಶತಮಾನಗಳಿಂದ ಜನ ಜೀವಭಯದಲ್ಲಿಯೇ ನದಿ ದಾಟುತ್ತಿದ್ದಾರೆ.
ಈ ನದಿಗೆ ಅಡ್ಡವಾಗಿ ಕಿರುಸೇತುವೆ ನಿರ್ಮಿಸಿಕೊಡುವಂತೆ ಹಲವು ದಶಕಗಳಿಂದ ಮನವಿ ಕೊಡುತ್ತಲೇ ಬಂದಿದ್ದಾರೆ. ಆದರೆ ಈ ತನಕ ಸ್ಪಂದಿಸುವ ಕೆಲಸವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಕಳೆದ ವರ್ಷ ಎಲ್ಲ ಕಾಲುಸಂಕಗಳ ಗುರುತಿಸುವ ಕೆಲಸವಾಯಿತು. ಮತ್ತೆ ಯಾವುದೇ ಪ್ರಕ್ರಿಯೆ ಆಗಲಿಲ್ಲ. ಈಗ ಟೆಂಡರ್ ಪ್ರಕ್ರಿಯೆ ಬಾಕಿ ಇದೆ ಎನ್ನುವ ಉತ್ತರ ಸಿಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.
ಆದಷ್ಟು ಬೇಗ ಇಲ್ಲಿ ಕಿರುಸೇತುವೆ ಅಥವಾ ಡ್ಯಾಂ ಕಮ್ ಬ್ರಿಜ್ ಆದರೆ ಹಳ್ಳಿಯ ಜನರಿಗೆ ಅನುಕೂಲವಾಗುತ್ತದೆ. ಹಳ್ಳಿಯ ಮುಗ್ದ ಜನರ ಕನಸು ನನಸು ಮಾಡುವಲ್ಲಿ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು ಇನ್ನಾದರೂ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ.