ಕುಂದಾಪುರ, ಜೂ 01(DaijiworldNews/MS): ಕುಂದಾಪುರ ತಾಲೂಕಿನಲ್ಲಿ ನತ್ತೆ ಚಿರತೆ ದಾಳಿ ಮುಂದುವರೆದಿದೆ.
ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆಗಳ ಬೆನ್ನಿಗೆ ಮತ್ತೆ ಮತ್ತೆ ಚಿರತೆಗಳು ದಾಳಿ ನಡೆಸುತ್ತಿರುವುದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ಸೌಕೂರು ಬೋಳುಕಟ್ಟೆ ಸಮೀಪ ಬುಧವಾರ ರಾತ್ರಿ ಹೊರಗೆ ಕಟ್ಟಿ ಹಾಕಿದ್ದ ದನವೊಂದರ ಮೇಲೆ ಚಿರತೆ ದಾಳಿ ನಡೆಸಿದ್ದು ತಿಂದು ಹಾಕಿದೆ. ಇಲ್ಲಿನ ಸ್ಥಳೀಯ ನಿವಾಸಿ ಚಂದ್ರ ಶೆಟ್ಟಿ ಎಂಬುವರ ಮನೆಯ ದನ ಬುಧವಾರ ರಾತ್ರಿ ಚಿರತೆ ದಾಳಿಗೆ ಬಲಿಯಾಗಿದೆ.
ಒಂದು ವರ್ಷದ ಹಿಂದೆ ಇದೇ ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದ ಪರಿಣಾಮ ಅಧಿಕಾರಿಗಳು ಬೋನು ಇಟ್ಟು ಚಿರತೆಯನ್ನು ಬಂಧಿಸಿ ಕೊಂಡೊಯ್ದಿದ್ದರು. ಆದರೆ ಮತ್ತೆ ಒಂದು ವರ್ಷದ ಬಳಿಕ ಇಲ್ಲಿ ಚಿರತೆದಾಳಿ ನಡೆಸಿದ್ದು ರೈತರು ಆತಂಕಿತರಾಗಿದ್ದಾರೆ. ಅರಣ್ಯಾಧಿಕಾರಿಗಳು ತಕ್ಷಣ ಕಾರ್ಯಾಚರಣೆ ನಡೆಸಿ ಚಿರತೆಯ ಬಂಧನ ಮಾಡಬೇಕು ಮತ್ತು ಸಂತ್ರಸ್ಥ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಇಲ್ಲಿನ ಗ್ರಾಮ ಪಂಚಾಯತ್ ಸದಸ್ಯ ಸುರೇಂದ್ರ ಶೆಟ್ಟಿ ಗುಲ್ವಾಡಿ ಆಗ್ರಹಿಸಿದ್ದಾರೆ.