ಕಾರ್ಕಳ, ಜೂ 01(DaijiworldNews/MS): ಅಂಗನವಾಡಿ ಮೇಲ್ವಿಚಾರಕಿ ಹುದ್ದೆಯ ಅಮಿಷವೊಡ್ಡಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ಪಂಗನಾಮ ಹಾಕಿರುವ ಘಟನೆ ಸಚ್ಚರಿಪೇಟೆ ಎಂಬಲ್ಲಿ ಬೆಳಕಿಗೆ ಬಂದಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ
ಸಚ್ಚರೀಪೇಟೆಯ ಪೊರ್ಸಲ್ ಶ್ರೀ ಕೃಷ್ಣ ನಿಲಯದ ಶಶಿಕಲಾ ( 43) ಎಂಬವರು ವಂಚಕನ ನಯ ಮಾತಿಗೆ ಮರುಳಾಗಿ ಲಕ್ಷಾಂತರ ಹಣ ನೀಡಿ ಕಳೆದುಕೊಂಡು ಕಾರ್ಕಳ ಗ್ರಾಮಾಂತರ ಮೆಟ್ಟಿಲೇರಿದ್ದಾರೆ. ಶಶಿಕಲಾ ಅಂಗನವಾಡಿ ಕಾರ್ಯಕರ್ತೆ ಆಗಿ ಕೆಲಸ ಮಾಡಿಕೊಂಡಿದ್ದು, ಇವರಿಗೆ ಬೆಂಗಳೂರಿನಲ್ಲಿ ವೇಣು ಗೋಪಾಲ ಎಂಬವರು ಅಂಗನವಾಡಿಯ ಮೇಲ್ವಾಚಾರಕಿ ಹುದ್ದೆಗೆ ನೇಮಕಾತಿ ಮಾಡಿಸಿ ಕೊಡುವುದಾಗಿ ತಿಳಿಸಿ 2 ಲಕ್ಷ ಹಣವನ್ನು ಬೇಡಿಕೆ ಇಟ್ಟಿದ್ದ.
ಅದರಂತೆ ಶಶಿಕಲಾ ರವರು ಮುಂಡ್ಕೂರು ಗ್ರಾಮದ ಸಚ್ಚರೀಪೇಟೆ ಕೆನರಾ ಬ್ಯಾಂಕ್ ತನ್ನ ಖಾತೆಯಿಂದ 2021 ನವಂಬರ್ 16ರಂದು ಮೊದಲ ಹಂತದಲ್ಲಿ ರೂ. 80,000 ಹಣವನ್ನು ವೇಣು ಗೋಪಾಲನ ಅಣ್ಣ ವಿಶ್ವನಾಥರವರ ಬ್ಯಾಂಕ್ ಖಾತೆಗೆ ಕಳುಹಿಸಿದ್ದರು.ನಂತರ 24/11/2021 ರಂದು ರೂ. 1,00,000. 25/11/2021 ರಂದು ರೂ. 25,000, 02/12/2021 ರಂದು ರೂ. 55,003. 14/12/2021 ರಂದು ರೂ. 10,000. 20/12/2021 ರಂದು ರೂ. 10,000 ಹೀಗೇ ಒಟ್ಟು ರೂ. 2,80,003 ನಗದನ್ನು 5 ಹಂತಗಳಲ್ಲಿ ಹಣವನ್ನು ವೇಣು ಗೋಪಾಲನ ಬ್ಯಾಂಕ್ ಖಾತೆಗೆ ಕಳುಹಿಸಿದ್ದಾರೆ.
2021ರ ಡಿಸೆಂಬರ್ 23ರಂದು ವೇಣು ಗೋಪಾಲನು ಕಾರ್ಕಳದ ಸಚ್ಚರಿಪೇಟೆಯಲ್ಲಿ ಇರುವ ಶಶಿಕಲಾ ಅವರ ಮನೆಗೆ ಬಂದು ರಸ್ತೆ ಅಪಘಾತವಾಗಿ ಗಾಯಗೊಂಡ ತನ್ನ ಮಗಳ ಚಿಕಿತ್ಸೆ ಬಗ್ಗೆ ಸಾಲ ರೂಪದಲ್ಲಿ ನೆರವು ಕೇಳಿದನು. ಅದರಂತೆ ಶಶಿಕಲಾ ರವರು ರೂ. 2,20,000 ವನ್ನು ವೇಣಗೋಪಾಲನಿಗೆ ನೀಡಿದ್ದರು. ಇದುವರೆಗೂ ಅದನ್ನು ಕೂಡಾ ವಾಪಾಸು ನೀಡದೇ ಸತಾಯಿಸುತ್ತಿದ್ದನು.
ಹಣದ ಬಗ್ಗೆ ವಿಚಾರಿಸಿದ ಶಶಿಕಲಾ ರವರ ಮೊಬೈಲ್ ನಂಬ್ರ ಬ್ಲಾಕ್ ಮಾಡಿ ನಂಬಿಕೆ ದ್ರೋಹ, ವಂಚನೆ ಮಾಡಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.