ಬಂಟ್ವಾಳ, ಮೇ 31 (DaijiworldNews/SM): ನಂದಾವರ ಅರಮನೆಹಿತ್ಲು ರಸ್ತೆಯನ್ನು ಅತಿಕ್ರಮಿಸಿ ಸ್ಥಳೀಯ ವ್ಯಕ್ತಿ ಅಬ್ದುಲ್ ರಶೀದ್ ಆವರಣ ಗೋಡೆ ನಿರ್ಮಿಸಿರುವ ಕುರಿತು ಸ್ಥಳೀಯ ನಿವಾಸಿಗಳು ಹಾಗೂ ಬಂಟ್ವಾಳ ಬಿಜೆಪಿಯವರು ಪ್ರತಿಭಟನೆಯ ನಡೆಸಿ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ತಹಶೀಲ್ದಾರ್ ಸ್ಥಳಕ್ಕೆ ತೆರಳಿ ಗೋಡೆ ತೆರವು ಮಾಡಿದ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ಅಬ್ದುಲ್ ರಶೀದ್ ಎಂಬವರು ಆವರಣ ಗೋಡೆ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಮಹಿಳೆ ರೇಷ್ಮಾ ಅವರು ಗ್ರಾ.ಪಂ.ಗೆ ದೂರು ನೀಡಿದ್ದು, ಸುಮಾರು 30 ಮನೆಗಳಿಗೆ ತೊಂದರೆಯಾಗುತ್ತದೆ ಎಂದು ವಿವರಿಸಿದ್ದರು. ಅದರಂತೆ ಸಜೀಪಮುನ್ನೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ರಶೀದ್ಗೆ ನೋಟಿಸ್ ನೀಡಿ ತೆರವು ಮಾಡುವಂತೆ ಆದೇಶಿಸಿದ್ದರು.
ಆದರೂ ತೆರವು ಮಾಡದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಬಂಟ್ವಾಳ ಬಿಜೆಪಿ ಪ್ರಮುಖರು ತಡೆಗೋಡೆ ತೆರವು ಮಾಡುವಂತೆ ಆಗ್ರಹಿಸಿದ್ದು, ಈ ವೇಳೆ ಗೊಂದಲದ ವಾತಾವರಣ ಉಂಟಾಗಿತ್ತು. ಬಳಿಕ ಇವರು ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಜಮಾಯಿಸಿ ಪ್ರತಿಭಟನೆಗೆ ಮುಂದಾಗಿ ತೆರವಿಗೆ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಅವರನ್ನು ಒತ್ತಾಯಿಸಿದರು. ಶಾಸಕ ರಾಜೇಶ್ ನಾಯಕ್ ಅವರು ಕೂಡ ದೂರವಾಣಿ ಮೂಲಕ ತಹಶೀಲ್ದಾರ್ ಅವರನ್ನು ಸಂಪರ್ಕಿಸಿ ತೆರವಿಗೆ ಕ್ರಮಕೈಗೊಳ್ಳಲು ಸೂಚಿಸಿದರು.
ಬಳಿಕ ತಹಶೀಲ್ದಾರ್ ಅವರು ಸ್ಥಳಕ್ಕೆ ತೆರಳಿ ಅಕ್ರಮ ನಿರ್ಮಾಣವನ್ನು ತೆರವು ಮಾಡಿಸಿದರು. ಈ ಕುರಿತು ಪ್ರತಿಭಟನೆಕಾರರಿಗೆ ತಹಶೀಲ್ದಾರ್ ಮಾಹಿತಿ ನೀಡುತ್ತಿದ್ದಾಗ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಆತ ಅಕ್ರಮ ನಿರ್ಮಾಣ ಮಾಡಿರುವ ಕುರಿತು ಕ್ರಮಕೈಗೊಳ್ಳಲು ಆಗ್ರಹಿಸಿದರು. ಅದರ ಕುರಿತು ಪಿಡಿಒ ಕ್ರಮಕೈಗೊಳ್ಳಲಿದ್ದಾರೆ ಎಂದು ತಹಶೀಲ್ದಾರ್ ತಿಳಿಸಿದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಬಿ.ದೇವದಾಸ್ ಶೆಟ್ಟಿ, ಡೊಂಬಯ ಅರಳ, ರಮನಾಥ ರಾಯಿ, ಪ್ರಭಾಕರ ಪ್ರಭು, ಸುದರ್ಶನ್ ಬಜ, ಪುರುಷೋತ್ತಮ ಶೆಟ್ಟಿ, ನಂದರಾಮ ರೈ, ಪವನ್ಕುಮಾರ್ ಶೆಟ್ಟಿ, ಪ್ರವೀಣ್ ಗಟ್ಟಿ, ಎನ್.ಧನಂಜಯ ಶೆಟ್ಟಿ, ಸುರೇಶ್ ಕೋಟ್ಯಾನ್, ಯಶೋಧರ ಕರ್ಬೆಟ್ಟು, ಮಾಧವ ಕರ್ಬೆಟ್ಟು, ಮಹೇಶ್ ಶೆಟ್ಟಿ, ಲಕ್ಷಣ್ರಾಜ್, ಅಜಿತ್ ಶೆಟ್ಟಿ, ಪ್ರಶಾಂತ್ ಕೆಂಪುಗುಡ್ಡೆ, ಕಿಶೋರ್ ಶೆಟ್ಟಿ ಉಪಸ್ಥಿತರಿದ್ದರು.