ಮಂಗಳೂರು, ಮೇ 31 (DaijiworldNews/SM): ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಣ್ಣ ಸಿ.ಡಿ. ತಮ್ಮ ಹುದ್ದೆಯಿಂದ ಅಮಾನತುಗೊಂಡಿದ್ದಾರೆ. ಇತ್ತೀಚಿಗೆ ನಡೆದ ಚುನಾವಣಾ ಕರ್ತವ್ಯದ ವೇಳೆ ಲೋಪ ಎಸಗಿದ್ದಾರೆ ಎನ್ನುವುದು ಅವರ ವಿರುದ್ಧ ಇರುವ ಆರೋಪ. ಈ ಹಿನ್ನೆಲೆ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅಮಾನತು ಆದೇಶ ಹೊರಡಿಸಿದ್ದಾರೆ.
ಇನ್ನು ಈ ನಡುವೆ ಜಯಣ್ಣ ಅವರು ತಮ್ಮ ವಿರುದ್ಧ ಮಾಡಲಾದ ಆರೋಪಗಳನ್ನು ನಿರಾಕರಿಸಿದ್ದಾರೆ. ಹಾಗೂ ಜಿಲ್ಲಾಧಿಕಾರಿ ಹೊರಡಿಸಿದ ನೋಟೀಸನ್ನು ಪ್ರಶ್ನಿಸಿದ್ದಾರೆ. ಜಿಲ್ಲಾಧಿಕಾರಿಗಳು ಮೇ 9 ರಂದು ಚುನಾವಣೆಯ ಪೂರ್ವ ಸಿದ್ಧತೆ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿದ್ದು, ಈ ವೇಳೆ ಹಾಜರಿರುವಂತೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಜಯಣ್ಣ ಅವರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದಾರೆ. ಆಗ ಜಯಣ್ಣ ಅವರು ತಾನು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ದಾಖಲೆಗಳನ್ನು ಸಲ್ಲಿಸಲು ಬೆಂಗಳೂರಿಗೆ ತೆರಳುತ್ತಿರುವುದರಿಂದ ಪತ್ರಿಕಾಗೋಷ್ಠಿಗೆ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.
ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿಯ ಅನುಮತಿ ಪಡೆಯದೆ ಜಿಲ್ಲಾ ಕೇಂದ್ರವನ್ನು ತೊರೆಯುವ ಮೂಲಕ ಜಯಣ್ಣ ಅವರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಜಿಲ್ಲಾಧಿಕಾರಿ ನೋಟೀಸ್ ನೀಡಿದ್ದರು.
ಇನ್ನು ಪದವಿ ಪೂರ್ವ ಕಾಲೇಜುಗಳಲ್ಲಿನ ಮತಗಟ್ಟೆಗಳನ್ನು ಮೇ 9 ಮತ್ತು 10 ರಂದು ತೆರೆದಿಡಬೇಕಾಗಿದ್ದು, ಈ ಬಗ್ಗೆ ಕಾಲೇಜುಗಳಿಗೆ ಮಾಹಿತಿ ನೀಡಬೇಕಾಗಿತ್ತು. ಆದರೆ, ಡಿಡಿಪಿಯು ಜಯಣ್ಣ ಅವರು ಸಮರ್ಪಕ ಮಾಹಿತಿ ನೀಡದ ಹಿನ್ನೆಲೆ ಚುನಾವಣಾ ಸಿಬ್ಬಂದಿಗಳು ಮತಗಟ್ಟೆಗಳಿಗೆ ತೆರಳುವಾಗ ವಿಳಂಬವಾಗಿತ್ತು. ಈ ಕಾರಣದಿಂದಾಗಿ ಜಿಲ್ಲಾ ಚುನಾವಣಾ ಆಧಿಕಾರಿಗೆ ಮಾಹಿತಿ ನೀಡದೆ ಕೇಂದ್ರ ಸ್ಥಾನ ತೊರೆದಿರುವುದು ಜಯಣ್ಣ ಅವರ ಕರ್ತವ್ಯ ಲೋಪವಾಗಿದೆ ಎಂದು ಜಿಲ್ಲಾಧಿಕಾರಿಗಳ ನೋಟೀಸ್ನಲ್ಲಿ ತಿಳಿಸಲಾಗಿದೆ.