ಕಾಸರಗೋಡು, ಮೇ 31 (DaijiworldNews/HR): ಸರಕಾರದ ಯೋಜನೆಗಳು ಹಾಗೂ ಜನಸಾಮಾನ್ಯರಿಗೆ ನ್ಯಾಯ ತಲಪಿಸುವುದೇ ಅದಾಲತ್ಗಳ ಉದ್ದೇಶ ಎಂದು ಕೇರಳ ಬಂದರು ಸಚಿವ ಅಹಮ್ಮದ್ ದೇವರ್ ಕೋವಿಲ್ ಹೇಳಿದರು.
ಉಪ್ಪಳ ನಯಾಬಜಾರಿನ ಲಯನ್ಸ್ ಭವನದಲ್ಲಿ ನಡೆದ ಮಂಜೇಶ್ವರ ತಾಲೂಕು ಕುಂದುಕೊರತೆ ನಿವಾರಣಾ ಅದಾಲತ್ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರದ ಯೋಜನೆಗಳು ಸಾಮಾನ್ಯ ಜನರಿಗೆ ತಲಪಬೇಕು. ನಾಗರಿಕ ಹಕ್ಕು ಹಾಗೂ ಸವಲತ್ತುಗಳು ಸಕಾಲದಲ್ಲಿ ಜನಸಾಮಾನ್ಯರಿಗೆ ಒದಗಿಸಲು ಕೆಲ ತಾಂತ್ರಿಕ ಅಡಚಣೆಗಳು ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಸುಲಭವಾಗಿ ಜನಸಾಮಾನ್ಯರಿಗೆ ತಲಪಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಅದಾಲತ್ ಗಳನ್ನು ಆಯೋಜಿಸಲಾಗಿದೆ ಎಂದು ಸಚಿವರು ಹೇಳಿದರು.
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ.ಇಂಪಾಶೇಖರ್ ಮುಖ್ಯ ಅತಿಥಿಯಾಗಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶೆಮೀನಾ ಟೀಚರ್, ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರುಬೀನಾ ನೌಫಲ್, ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲೆವಿನಾ ಮೊಂತೆರೊ, ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ.ಜಯಂತಿ, ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಆಳ್ವ, ಎಣ್ಮ ಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜೆ.ಎಸ್.ಸೋಮಶೇಖರ ಮೊದಲಾದವರು ಮಾತನಾಡಿದರು. ಎಡಿಎಂ ಕೆ.ನವೀನ್ ಬಾಬು ಸ್ವಾಗತಿಸಿ, ಉಪ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಜಗ್ಗಿ ಪೌಲ್ ವಂದಿಸಿದರು.
ಅದಾಲತ್ ನಲ್ಲಿ ೩೦೧ ದೂರುಗಳು ಆನ್ ಲೈನ್ ಆಗಿ ಲಭಿಸಿತ್ತು. ಈ ಪೈಕಿ 189 ದೂರುಗಳ ನ್ನು ಇತ್ಯರ್ಥಗೊಳಿಸಲಾಗಿತ್ತು. 61 ದೂರುಗಳನ್ನು ತಿರಸ್ಕರಿಸಲಾಯಿತು. 112 ದೂರುಗಳ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಲಾಯಿತು.