ಮಂಗಳೂರು, ಮೇ 31 (DaijiworldNews/HR): ಕೆಲವರು ಹಳೆಯ ಬಟ್ಟೆ, ಚಪ್ಪಲಿ, ದಿನಪತ್ರಿಕೆ, ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಹಳೆಯ ಪುಸ್ತಕಗಳು, ಎಲೆಕ್ಟ್ರಾನಿಕ್ ವಸ್ತುಗಳು ಸಹಿತ ವಿವಿಧ ವಸ್ತುಗಳನ್ನು ಉಪಯೋಗಿಸದೇ ಸುಮ್ಮನೇ ಬಿಸಾಡುತ್ತಾರೆ. ಆದರೆ ಇದೀಗ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಸಂಗ್ರಹಿಸುವ ಉದ್ದೇಶದಿಂದ ಪಾಲಿಕೆ ವತಿಯಿಂದ ಆರ್ಆರ್ಆರ್ ಎಂಬ ಹೆಸರಿನ ಕೇಂದ್ರಗಳನ್ನು ತೆರೆಯಲಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧೆಡ ನಿರ್ಮಿಸಲಾಗಿರುವ ಕೇಂದ್ರಗಳಿಗೆ ಸಾರ್ವಜನಿಕರು ಈಗಾಗಲೇ ಸಂಬಂಧಿಸಿದ ವಸ್ತುಗಳನ್ನು ತಂದು ಕೊಡುತ್ತಿದ್ದು, ಮೇ 29ರ ವರೆಗೆ 1,662 ಕೆ.ಜಿ.(1,662 ಟನ್)ಯಷ್ಟು ವಿವಿಧ ವಸ್ತುಗಳ ಸಂಗ್ರಹವಾಗಿದೆ.
ಆಆಆರ್ ಕೇಂದ್ರಗಳನ್ನು ಲಾಲ್ಬಾಗ್ ಕೇಂದ್ರ ಕಚೇರಿ, ಸುರತ್ಕಲ್ ವಲಯ ಕಚೇರಿ, ಮಣ್ಣಗುಡ್ಡೆ ವಾರ್ಡ್ ಕಚೇರಿ, ವೆಲೆನ್ಸಿಯಾ ವಾರ್ಡ್ ಕಚೇರಿ, ಕಾವೂರು ಮಾರುಕಟ್ಟೆ ಹಂಪನಕಟ್ಟೆಯ ಕುದುಲ್ ರಂಗರಾವ್ ಪುರಭವನ, ಸುರತ್ಕಲ್ ಮಾಧವ ನಗರದ ಒಣತ್ಯಾಜ್ಯ ಸಂಗ್ರಹ ಕೇಂದ್ರ, ಕೊಳಚೆ ನೀರು ಸಂಸ್ಕರಣ ಘಟಕ, ಬಜಾಲ್ನ ಒಣತ್ಯಾಜ್ಯ ಸಂಗ್ರಹ ಕೇಂದ್ರ, ಕೊಳಚೆ ನೀರು ಸಂಸ್ಕರಣ ಘಟಕ, ಕಾವೂರಿನ ಬಜಾಲ್ನ ಒಣತ್ಯಾಜ್ಯ ಸಂಗ್ರಹ ಕೇಂದ್ರ, ಕೊಳಚೆ ನೀರು ಸಂಸ್ಕರಣ ಘಟಕ, ತಣ್ಣೀರು ಬಾವಿ ಬೀಚ್ನಲ್ಲಿ ತೆರೆಯಲಾಗಿದೆ.
ಇನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸ್ವಚ್ಛ ಭಾರತ್ ಮಿಷನ್ ನಗರ 2.0 ಯೋಜನೆಯಡಿ ಆರಂಭಿಸಲಾಗಿರುವ 'ನನ್ನ ಲೈಫ್-ನನ್ನ ಸ್ವಚ್ಛ ನಗರ ಅಭಿಯಾನ' ಕಾರ್ಯಕ್ರಮದಡಿ, (ಕಡಿಮೆಗೊಳಿಸು), ರೀಯೂಸ್ (ಮರುಬಳಕೆ) ಮತ್ತು ರಿಸೈಕಲ್ (ಪುನರ್ ಬಳಕೆ ) - ಆರ್ಆರ್ಆರ್ ಕೇಂದ್ರವನ್ನು ದೇಶದ ಎಲ್ಲನಗರ ಸ್ಥಳೀಯ ಸಂಸ್ಥೆಗಳಲ್ಲಿ ಆರಂಭಿಸಲಾಗಿದೆ.
ಡಂಪಿಂಗ್ ಯಾರ್ಡ್ಗೆ ಹೋಗುವ ತ್ಯಾಜ್ಯವನ್ನು ಕಡಿಮೆಗೊಳಿಸಿ, ಮರುಬಳಕೆ ಮತ್ತು ಪುನರ್ ಬಳಕೆಗೆ ಪ್ರೋತ್ಸಾಹ ನೀಡುವುದು ಈ ಆರ್ಆರ್ಆರ್ ಕೇಂದ್ರದ ಉದ್ದೇಶವಾಗಿದೆ.
ಜೂ. 5ರ ವರೆಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆರ್ಆರ್ಆರ್ ಕೇಂದ್ರ ತೆರೆದಿರಲಿದದು, 5 ಕೆ.ಜಿ.ಗಿಂತ ಹೆಚ್ಚು ತೂಕದ ವಸ್ತುಗಳನ್ನು ತಂದು ಕೊಡುವವರಿಗೆ ಕಾಂಪೋಸ್ಟ್ ಗೊಬ್ಬರ, ಕಡಿಮೆ ನೀಡಿದವರಿಗೆ ಇತರ ಕೆಲವು ವಸ್ತುಗಳನ್ನು ಕೊಡುಗೆಯಾಗಿ ನೀಡಲಾಗುತ್ತಿದೆ.