ಉಳ್ಳಾಲ ನ 07 : ಇಲ್ಲಿನ ಕೆ.ಸಿ.ರೋಡ್ ನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಲ್ಲಿ ಇಬ್ಬರ ಭದ್ರತಾ ಸಿಬಂದಿಗಳು ಸಹಿತ ಮೂವರು ಅಸಹಜವಾಗಿ ಸಾವನ್ನಪ್ಪಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಇಂದು ಮುಂಜಾನೆ ಬ್ಯಾಂಕ್ ಸಿಬ್ಬಂದಿಗಳು ಬಂದಾಗ ಕಚೇರಿ ತೆರೆಯದೆ ಇದ್ದದ್ದನ್ನು ಕಂಡು ಒಳಗೆ ಮಲಗಿದ್ದ ಭದ್ರತಾ ಸಿಬ್ಬಂದಿ ಕಿಟಕಿಯಲ್ಲಿ ಕೂಗಿ, ನೀರು ಹಾಕಿ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಇದ್ಯಾವುದಕ್ಕೆ ಸ್ಪಂದಿಸದೆ ಇದ್ದಾಗ ಗಾಬರಿಗೊಂಡ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಬಾಗಿಲು ಒಡೆದು ಪೊಲೀಸರು ಪರಿಶೀಲಿಸಿದಾಗ ಮೂವರು ಸ್ಥಳದಲ್ಲ್ಲೇ ಮೃತಪಟ್ಟ ವಿಷಯ ಬೆಳಕಿಗೆ ಬಂದಿದೆ.ಮೃತರನ್ನು ಸೋಮನಾಥ್( 55), ಉಮೇಶ್ ( 60) ಮತ್ತು ಸಂತೋಷ್(52) ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ ಸಿಡಿಲು ಮಳೆಗೆ ವಿದ್ಯುತ್ ಕೈಕೊಟ್ಟ ವೇಳೆ ಜನರೇಟರ್ ಆನ್ ಮಾಡಿ ಮಲಗಿದ ಕಾರಣ ಅದರಿಂದ ಹೊರ ಬಂದ ವಿಷ ಗಾಳಿ (ಕಾರ್ಬನ್ ಮೊನೋಕ್ಸೈಡ್ )ಯಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದ್ದು, ಸ್ಥಳಕ್ಕಾಗಮಿಸಿರುವ ಉಳ್ಳಾಲ ಠಾಣಾ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.