Karavali
ಕುಂದಾಪುರ: 'ಕುಡಿಯುವ ನೀರು ಸಮಸ್ಯೆಯನ್ನು ಆದ್ಯತೆಯ ನೆಲೆಯಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಬೇಕು' - ಕಿರಣ್ ಕೊಡ್ಗಿ
- Tue, May 30 2023 04:51:42 PM
-
ಕುಂದಾಪುರ, ಮೇ 30 (DaijiworldNews/HR): ಡೀಮ್ಡ್ ಫಾರೆಸ್ಟ್ ಸಮಸ್ಯೆಯ ಗೊಂದಲಕ್ಕೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೇ ಮಾಡುವ ಮೂಲಕ ಸಮಸ್ಯೆ ಪರಿಹಾರ ಮಾಡಬೇಕು. ಕುಡಿಯುವ ನೀರು ಸಮಸ್ಯೆಯನ್ನು ಆದ್ಯತೆಯ ನೆಲೆಯಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಜಲಜೀವನ್ ಮಿಷನ್ ಯೋಜನೆಯಡಿ ಪೈಪ್ ಲೈನ್, ಟ್ಯಾಂಕ್ ನಿರ್ಮಾಣಕ್ಕೆ ಮೀಸಲು ಅರಣ್ಯದಿಂದ ತಾಂತ್ರಿಕ ಅಡಚಣೆಗಳು ಆಗುತ್ತಿದ್ದು ಇದನ್ನು ಪರಿಹರಿಸಿಕೊಳ್ಳಬೇಕು. ಸಮಸ್ಯೆಗಳಿದ್ದರೆ ತಕ್ಷಣ ನನ್ನ ಗಮನಕ್ಕೆ ತನ್ನಿ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಕುಂದಾಪುರ ತಾ.ಪಂ.ನಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ, ಮಳೆಗಾಲದ ಮುನ್ನೆಚ್ಚರಿಕೆ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ಸಾರ್ವಜನಿಕರ ನೀಡಲಾಗಿದೆ. ತುರ್ತು ಸ್ಪಂದಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಮೂನೆ 53ರ ಪ್ರಕಾರ 354, 94ಸಿಯಲ್ಲಿ 302, 94ಸಿಸಿಯಲ್ಲಿ 26 ಅರ್ಜಿಗಳು ಬಾಕಿ ಇದೆ ಎಂದರು.
ಕಾಳಾವರ ಗ್ರಾಮದ ದೇವಸ್ಥಾನ ಬೆಟ್ಟು, ಗುಳ್ಳಾಡಿ ಭಾಗದಲ್ಲಿ ನೀರಿನ ಸಮಸ್ಯೆ ಇದೆ.100 ಮನೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಅಂತರ್ಜಲ ಮಟ್ಟ ಕುಸಿದಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಮಡಾಮಕ್ಕಿಯಲ್ಲಿ 10 ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು ಪೈಪ್ಲೈನ್ ಮಾಡಲು ಜಾಗದ ಸಮಸ್ಯೆ ಉಂಟಾಗಿತ್ತು. ಈಗ ಅದನ್ನು ಸರಿಪಡಿಸಿಕೊಳ್ಳಲಾಗಿದೆ. ಚಕರ್ ಮಕ್ಕಿ ಎಂಬಲ್ಲಿ 30 ಮನೆಗಳಿಗೆ ನೀರಿನ ಸಮಸ್ಯೆ ಇದೆ. ಜೆಜೆಎಂನಲ್ಲಿ ಪೈಪ್ ಲೈನ್ ಆಗಿದ್ದರೂ ಕೂಡಾ ನೀರಿನ ಮೂಲದ ಸಮಸ್ಯೆಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದರು. ಹೆಂಗವಳ್ಳಿಯಲ್ಲಿ 75 ಮನೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ವಿದ್ಯುತ್ ಲೈನ್ ಅಳವಡಿಕೆಗೆ 28 ಲಕ್ಷ ಪಾವತಿಸಲಾಗಿದೆ. ವಿದ್ಯುತ್ ಕೇಬಲ್ ಮೂಲಕ ಸರಳೀಕೃತ ಮಾರ್ಗ ಅನುಸರಿಸಿದರೆ ಹಣ ಉಳಿಯುತ್ತದೆ. ಈಗಾಗಲೇ ಡೆಪಾಸಿಟ್ ಮಾಡಲಾದ ಹಣ ಮರಳಿ ಪಡೆಯುವುದು ಕಷ್ಟ ಎನ್ನಲಾಗುತ್ತಿದೆ ಎಂದು ಹೆಂಗವಳ್ಳಿ ಅಧಿಕಾರಿಯೋರ್ವರು ಸಭೆಯ ಗಮನಕ್ಕೆ ತಂದರು. ಈ ವಿಚಾರವನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕೂಡಲೇ ಸರಿಪಡಿಸಿ ಕೊಡುವಂತೆ ಶಾಸಕರು ಸೂಚನೆ ನೀಡಿದರು. ಕೋಡಿ ಬೇಂಗ್ರೆ, ಯಡ್ತಾಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಅಲ್ಲಿನ ಅಧಿಕಾರಿಗಳ ಶಾಸಕರ ಮುಂದಿಟ್ಟರು.
ಶಾಲೆಗಳು ಪುನರಾರಂಭವಾಗುತ್ತಿವೆ. ಕುಡಿಯಲು ನೀರು, ಬಿಸಿಯೂಟಕ್ಕೆ ನೀರಿನ ವ್ಯವಸ್ಥೆ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುವುದಿಲ್ಲ. ಕುಂದಾಪುರ ಬೋರ್ಡ್ ಹೈಸ್ಕೂಲ್ ನಲ್ಲಿ ಸಾಕಷ್ಟು ಪ್ರಮಾಣದ ವಿದ್ಯಾರ್ಥಿಗಳು ಇರುವುದರಿಂದ ಪುರಸಭೆಯ ಮೂಲಕ ನೀರು ಸರಬರಾಜು ಮಾಡಲು ಮನವಿ ಸಲ್ಲಿಸಿದ್ದೇವೆ. ಮೊದಲ ಮಳೆ ನೀರು, ಬಾವಿಯಲ್ಲಿ ಹೊಸ ನೀರು ಇತ್ಯಾದಿ ಕಾರಣಗಳಿಂದ ಕುಡಿಯಲು ಮಕ್ಕಳು ಮನೆಯಿಂದ ನೀರು ತರುವಂತೆ ಸೂಚನೆ ನೀಡಲಾಗಿದೆ ಎಂದರು.
ಕೊಲ್ಲೂರು ಹಾಲಾಡಿ ಮಾರ್ಗವಾಗಿ ಸರ್ಕಾರಿ ಬಸ್ ನಿಲ್ಲಿಸಿರುವ ಬಗ್ಗೆ ಉತ್ತರಿಸಿದ ಕೆಎಸ್ ಆರ್ ಟಿಸಿ ಅಧಿಕಾರಿಗಳು, ಮಾರಣಕಟ್ಟೆಯಿಂದ ಶಂಕರನಾರಾಯಣಕ್ಕೆ ಕ್ರೊಡಬೈಲೂರು ಮಾರ್ಗವಾಗಿ ಬಸ್ ಸಂಚರಿಸುತ್ತಿದೆ. ನೆಂಪುವಿನಿಂದ ಶಂಕರನಾರಾಯಣ ಬರುವ ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗುತ್ತದೆ ಎಂದರು.
ಕುಂದಾಪುರ ತಾಲೂಕಲ್ಲಿ 140 ಅಂಗನವಾಡಿ ಕೇಂದ್ರವಿದ್ದು 114 ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೊಳಹಳ್ಳಿ ಮಾಸ್ತಿಕಟ್ಟೆಯ ಅಂಗನವಾಡಿ ಕೇಂದ್ರ ಬಾಡಿಗೆ ಕಟ್ಟಡದಲ್ಲಿದೆ. ಅಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಡಿಮ್ಡ್ ಸಮಸ್ಯೆ ಇದೆ ಎಂದು ಮಹಿಳಾ ಮಕ್ಕಳು ಇಲಾಖೆಯ ಮೇಲ್ವಿಚಾರಕಿ ತಿಳಿಸಿದರು.
ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಕುಂದಾಪುರ ತಾಲೂಕಲ್ಲಿ 4150 ಹೇಕ್ಟೇರ್ ಪ್ರದೇಶದಲ್ಲಿ ಭತ್ತ ಬೇಸಾಯದ ಗುರಿಯಿದ್ದು 250 ಕ್ವಿಂಟಾಲ್ ಎಂ.ಒ4 ಬಿತ್ತನೆ ಬೀಜ ದಾಸ್ತಾನು ಇದೆ.ಸುಣ್ಣ ಕೂಡಾ ದಾಸ್ತಾನು ಇದೆ. ಎಂದು ರೂಪಾ ಮಾಡ ತಿಳಿಸಿದರು.
ಸಭೆಯಲ್ಲಿ ಯತೀಶ, ಕುಂದಾಪುರ, ಹೆಬ್ರಿ, ಬ್ರಹ್ಮಾವರ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಕಛೇರಿಯಲ್ಲಿ 52 ಹುದ್ದೆಗಳಿರಬೇಕಿದ್ದು ಈಗ 24 ಜನ ಸಿಬ್ಬಂದಿಗಳಿದ್ದಾರೆ. 19 ಜನ ಸಿಬ್ಬಂದಿಗಳು ಹೊರಗಡೆ ನಿಯೋಜನೆಯಲ್ಲಿದ್ದಾರೆ.ಒಬ್ಬೊಬ್ಬರು 3-4 ವಿಭಾಗಗಳನ್ನು ನೋಡಿಕೊಳ್ಳಬೇಕಾಗುತ್ತದೆ. ಕನಿಷ್ಠ 3 ಜನ ಸಿಬ್ಬಂದಿಗಳಾದರೂ ತುರ್ತು ಬೇಕು ಎಂದು ತಹಶೀಲ್ದಾರ್ ಶಾಸಕರ ಗಮನಕ್ಕೆ ತಂದರು.
ಕುಂದಾಪುರ ತಾಲೂಕಲ್ಲಿ 11 ಪಶುಸಂಗೋಪನಾ ಇಲಾಖೆಯ ಆಸ್ಪತ್ರೆಗಳಿದ್ದು 3 ಜನ ವೈದ್ಯರಿದ್ದಾರೆ. ಒಬ್ಬ ವೈದ್ಯರು ನಾಲ್ಕು ಆಸ್ಪತ್ರೆಗಳ ಕಾರ್ಯನಿರ್ವಹಿಸಬೇಕಾಗುತ್ತದೆ. ಅಟೆಂಡರ್ ಹುದ್ದೆಗಳು ಖಾಲಿ ಇದೆ. ಲಸಿಕಾ ಕಾರ್ಯಕ್ರಮಗಳು ಬಂದರೆ ತುಂಬಾ ಕಷ್ಟವಾಗುತ್ತದೆ ಎಂದು ಪಶು ಸಂಗೋಪನಾ ಇಲಾಖೆಯ ಡಾ.ಬಾಬಣ್ಣ ಪೂಜಾರಿ ತಿಳಿಸಿದರು.
ಕುಡಿಯುವ ನೀರಿನ ವಿಚಾರದಲ್ಲಿ ಜಲಜೀವನ ಮಿಷನ್ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿ ಪೈಪ್ ಲೈನ್ ಕಾಮಗಾರಿ ಒಂದು ಸಂಸ್ಥೆ ಗುತ್ತಿಗೆ ಪಡೆದರೆ, ಟ್ಯಾಂಕ್ ನಿರ್ಮಾಣದ ಜವಬ್ದಾರಿ ಇನ್ನೊಂದು ಸಂಸ್ಥೆ ಪಡೆದಿರುತ್ತದೆ. ಕೆಲವೆಡೆ ಟ್ಯಾಂಕ್ ನಿರ್ಮಾಣಕ್ಕೆ, ಪೈಪ್ ಲೈನ್ ನಿರ್ಮಾಣಕ್ಕೆ ಅರಣ್ಯ ಇಲಾಖೆ, ಮೀಸಲು ಅರಣ್ಯ ಸಮಸ್ಯೆ ಆಗುತ್ತದೆ. ಇದರಿಂದ ಹಿನ್ನೆಡೆ ಆಗುತ್ತದೆ. ಆದಷ್ಟು ಕಂದಾಯ ಸ್ಥಳಗಳಲ್ಲಿಯೇ ಮಾಡಲಾಗುತ್ತದೆಯಾದರೂ ಟ್ಯಾಂಕ್ ನಿರ್ಮಾಣ ಎತ್ತರದ ಸ್ಥಳದಲ್ಲಿ ಆಗಬೇಕಾಗಿರುವುದು ಕಂದಾಯ ಭೂಮಿ ಹುಡುಕುವುದು ಕಷ್ಟವಾಗುತ್ತದೆ. ಕೇಂದ್ರ ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಈ ಬಗ್ಗೆ ತೀರ್ಮಾನ ತಗೆದುಕೊಳ್ಳಬೇಕು ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರಿನ ಬೇಡಿಕೆ ನಿರಂತರವಾಗಿರುತ್ತದೆ. ಪ್ರತಿವರ್ಷ ಹೊಸಮನೆ ನಿರ್ಮಾಣವಾಗುತ್ತದೆ. ನೀರಿನ ಸಂಪರ್ಕದ ಬೇಡಿಕೆ ಬರುತ್ತದೆ. ಕುಂದಾಪುರ ವಿಧಾನಸಭಾ ಕ್ಷೇತ್ರದ 7-8 ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯಿದ್ದು ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತದೆ. ತಾಲೂಕು ಮಟ್ಟದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳು ಸಾರ್ವಜನಿಕರ ಗಮನಕ್ಕೆ ಬರುವುದಿಲ್ಲ. ಅಧಿಕಾರಿಗಳು ಮತ್ತು ಮಾದ್ಯಮಗಳ ನಡುವೆ ಸಮನ್ವಯತೆ ಕಡಿಮೆಯಾಗುತ್ತದೆ ಎಂದು ಮಾದ್ಯಮ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು.