ಬಂಟ್ವಾಳ, ಮೇ 29 (DaijiworldNews/SM): ಕರ್ನಾಟಕ ವಿಧಾನಸಭೆಯ ಅಧ್ಯಕ್ಷರು, ಮಂಗಳೂರು ಶಾಸಕ ಯು.ಟಿ. ಖಾದರ್ ಅವರು ಹಿರಿಯ ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಅವರ ಬಂಟ್ವಾಳದ ಬಸ್ತಿಪಡ್ಪುವಿನಲ್ಲಿರುವ ಮನೆಗೆ ಸೋಮವಾರ ಸಂಜೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಪೂಜಾರಿ ಅವರು ಕರ್ನಾಟಕದಲ್ಲಿ ಖಾದರ್ ಅವರಿಗೆ ಸರಿಸಾಟಿ ಯಾರು ಇಲ್ಲ.ತಂದೆಯನ್ನು ಮೀರಿಸಿದ ಖಾದರ್ ಎಂದು ಹಾಡಿ ಹೊಗಳಿದರಲ್ಲದೆ, ಖಾದರ್ ಅವರ ರಾಜಕೀಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಪೀಕರ್ ಅವರ ಸಂಪೂರ್ಣ ಮಾತುಗಳನ್ನು ಟಿ.ವಿ.ಮೂಲಕ ವೀಕ್ಷಣೆ ಮಾಡಿದ್ದೇನೆ, ಖುಷಿಪಟ್ಟಿದ್ದೇನೆ ಎಂದು ತಿಳಿಸಿದರು.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ,ಸಂವಿಧಾನ ಬದ್ದವಾದ ಜವಬ್ದಾರಿಯ ಗೌರವ ಉಳಿಸುವ ಕಾರ್ಯ ಮಾಡುತ್ತೇನೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಹಿರಿಯ ಶಾಸಕರ,ಶಾಸಕರುಗಳು ಹಾಗೂ ಪ್ರತಿಪಕ್ಷದವರ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಜನಾರ್ದನ ಪೂಜಾರಿ ಹಾಗೂ ಹಿರಿಯರ ಸಲಹೆ ಸೂಚನೆಗಳನ್ನು ಪಾಲಿಸಿಕೊಂಡು, ಹಿರಿಯರಾದ ವೈಕುಂಠ ಬಾಳಿಗಾ ಮತ್ತು ಕೆ.ಎಸ್.ಹೆಗ್ಡೆ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಅನುಸರಿಸಿಕೊಂಡು ಜಿಲ್ಲೆಯ ಹಾಗೂ ಕ್ಷೇತ್ರದ ಮತದಾರರ ಗೌರವವನ್ನು ಉಳಿಸುವ ಕೆಲಸ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಪಕ್ಷದ ಪ್ರಮುಖರಾದ ಈಶ್ವರ್ ಉಳ್ಳಾಲ್, ಮಹಮದ್ ಮೋನು ,ಸದಾಶಿವ ಉಳ್ಳಾಲ್, ದೀಪಕ್ ಪಿಲಾರ್ , ಹಾಶೀರ್ ಪೆರಿಮಾರ್,ದಿನೇಶ್ ಪೂಜಾರಿ, ಪುರುಷೋತ್ತಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.