ಬಂಟ್ವಾಳ, ಮೇ 29 (DaijiworldNews/SM): ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಿಡಿಒಗಳು, ಗ್ರಾಪಂ ಅಧ್ಯಕ್ಷರು ಮತ್ತು ವಿವಿಧ ಇಲಾಖಾಧಿಕಾರಿಗಳ ಸಭೆಯೊಂದನ್ನು ಸೋಮವಾರ ನಡೆಸಿದ ಶಾಸಕ ರಾಜೇಶ್ ನಾಯ್ಕ್ ಅವರು ಮುಂಬರುವ ಮಳೆಗಾಲ ಸಂದರ್ಭ ಸಂಭಾವ್ಯ ಅಪಾಯಗಳನ್ನು ಎದುರಿಸಲು ಸನ್ನದ್ಧರಾಗಿದ್ದು, ಪೂರ್ವತಯಾರಿಯನ್ನು ನಡೆಸಬೇಕು. ಮಳೆ ಬರುವವರೆಗೆ ಕುಡಿಯುವ ನೀರಿನ ಸಮಸ್ಯೆಗಳೂ ತಲೆದೋರದಂತೆ ನೋಡಿಕೊಳ್ಳಬೇಕು. ದೂರವಾಣಿ ಸ್ವಿಚ್ ಆಫ್ ಮಾಡದೆ, ಸದಾ ಜನರ ಸಂಪರ್ಕದಲ್ಲಿರಬೇಕು ಎಂದು ಸೂಚನೆ ನೀಡಿದ್ದಾರೆ.
ಬಿ.ಸಿ.ರೋಡಿನ ತಾಲೂಕು ಪಂಚಾಯಿತಿಯ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ಸಭೆ ನಡೆಸಿದ ಶಾಸಕರು ಹಾರಿಕೆಯ ಉತ್ತರ ನೀಡಿದ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಮೇಲಧಿಕಾರಿಗಳ ಜೊತೆ ಮಾತನಾಡಿದರು.
ತಹಸೀಲ್ದಾರ್ ಎಸ್.ಬಿ.ಕೂಡಲಗಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರೊಂದಿಗೆ ವಿವಿಧ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದ ಶಾಸಕರು, ಮಳೆಗಾಲಕ್ಕೂ ಮುನ್ನ ದುರಸ್ತಿಗೊಳಿಸಬೇಕಾದ ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡಗಳು, ಅಪಾಯದ ಸ್ಥಿತಿಯಲ್ಲಿರುವ ಗುಡ್ಡಗಳು, ಹೆದ್ದಾರಿ, ಹೂಳೆತ್ತದ ಚರಂಡಿ, ಸಮಸ್ಯೆ ಉಂಟಾಗುವ ಸನ್ನಿವೇಶಗಳನ್ನು ನಿಭಾಯಿಸುವ ಕುರಿತು ತತ್ ಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕುಡಿಯುವ ನೀರಿಗೆ ತೊಂದರೆ ಮಾಡಿದವರ ವಿರುದ್ಧ ಕ್ರಮ:
ಮಳೆ ಬರುವವರೆಗೂ ಕುಡಿಯುವ ನೀರಿಗೆ ತೊಂದರೆ ಉಂಟಾಗುತ್ತಿರುವುದನ್ನು ಗಮನಿಸಿ, ಅಗತ್ಯ ಬಿದ್ದಲ್ಲಿ ಟ್ಯಾಂಕರ್ ಮೂಲಕವಾದರೂ ನೀರು ಪೂರೈಸಿ ಎಂದ ಶಾಸಕರು, ಪುಚ್ಚೇರಿ ಡ್ಯಾಂ ನಲ್ಲಿ ನೀರು ಖಾಲಿ ಮಾಡಿ ಸಂಗಬೆಟ್ಟು ಸಹಿತ ಸುತ್ತಮುತ್ತಲಿನ ಜನರ ಕುಡಿಯುವ ನೀರಿಗೆ ತೊಂದರೆ ಉಂಟುಮಾಡಿದವರು ಯಾರು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಕುಡಿಯುವ ನೀರಿಗೆ ತೊಂದರೆ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಎಂದು ಹೇಳಿದ ಶಾಸಕರು, ಯಾವುದೇ ಹಂತದಲ್ಲೂ ಸಮಸ್ಯೆ ಉದ್ಭವವಾಗಬಾರದು ಎಂದರು.