ಬೆಳ್ತಂಗಡಿ,ಮಾ30(AZM):ಎ.1ರಂದು ನಡೆಯಲಿರುವ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಮಾಜಿ ಅಧ್ಯಕ್ಷ ರಂಜನ್ ಜಿ. ಗೌಡರವರು ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾರವರು ತಿಳಿಸಿದ್ದಾರೆ.
ಬೆಳ್ತಗಂಡಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ರಜನ್ ಗೌಡರ ಕಾಂಗ್ರೆಸ್ ಸೇರ್ಪಡೆಯ ಕುರಿತು, ಈಗಾಗಲೇ ರಾಜ್ಯ ಮಟ್ಟದ ನಾಯಕರುಗಳೊಂದಿಗೆ ಚರ್ಚೆಗಳಾಗಿದ್ದು, ಅದಕ್ಕೆ ಸಮ್ಮತಿ ಲಭಿಸಿದೆ.ಅವರು ಬೆಳ್ತಂಗಡಿ ಬಿಜೆಪಿ ಅಧ್ಯಕ್ಷರಾಗಿದ್ದು, 2013ರ ವಿಧಾನಸಭಾ ಚುನಾವಣೆಯಲ್ಲಿ ಬೆಳ್ತಂಗಡಿಯಿಂದ ವಸಂತ ಬೆಂಗೇರರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದೀಗ ಬಿಜೆಪಿಯ ಧೋರಣೆಗಳಿಂದ ಬೇಸತ್ತ ಅವರು, ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದರು. ಇನ್ನು ಎ.01ರಂದು ನಡೆಯಲಿರುವ ಸಮಾವೇಶದ ಮೂಲಕ ದ.ಕ. ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ಸಿಗಲಿದೆ ಎಂದು ತಿಳಿಸಿದರು.
ದೇಶದ ಎಲ್ಲಾ ಭಾಗಗಳಲ್ಲೂ ಬಿಜೆಪಿ ವಿರುದ್ಧ ಧ್ವನಿ ಕೇಳಿಸುತ್ತಿದೆ. ಜನರು ಆಶಾಭಾವದಿಂದ ಕಾಂಗ್ರೆಸ್ ನತ್ತ ನೋಡುತ್ತಿದ್ದಾರೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ೨೦೦ಕ್ಕೂ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಮಿತ್ರ ಪಕ್ಷಗಳ ಸಹಕಾರದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.