ಮಂಗಳೂರು, ಮೇ 29 (DaijiworldNews/KH): ಮಾದಕ ವ್ಯಸನ ಮುಕ್ತ ಸಮಾಜವನ್ನಾಗಿಸುವ ನಿಟ್ಟಿನಲ್ಲಿ ಇಯಾನ್ ಕೇರ್ಸ್ ಫೌಂಡೇಶನ್ (ರಿ) ಮಂಗಳೂರು ಮತ್ತು ಎಂಸಿಸಿ ಬ್ಯಾಂಕ್ ಜಂಟಿಯಾಗಿ ‘ಯುವಕರು ಮದ್ಯ, ಹಾಗೂ ಮಾದಕ ವಸ್ತು ಸೇವನೆಯಿಂದ ಹೇಗೆ ಪಾರಾಗಬಹುದು’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗುತ್ತು.
ಕಿನ್ನಿಗೋಳಿಯ ಮೂರುಕಾವೇರಿಯಲ್ಲಿರುವ ಇಯಾನ್ ಕೇರ್ಸ್ನ ಸರ್ವ ಧರ್ಮ ಸಂಗಮದಲ್ಲಿ 'ಮಿತ್ರರ ಸನ್ನಿಧಿ' ಯ ಉದ್ಘಾಟನೆ ಕಾರ್ಯಕ್ರಮ ನಡೆದಿದ್ದು, ಶ್ರಿ ದುರ್ಗಾ ಪರಮೇಶ್ವರಿ ಮಹಮಾಯಿ ದೇವಸ್ಥಾನದ ಮೊಕ್ತೇಸರ ಹಾಗೂ ಮೋಹನ್ ದಾಸ್ ಸುರತ್ಕಲ್ ಉಲೆಪಾಡಿ ಇವರು ಉದ್ಘಾಟಿಸಿದರು.
ದಿವಂಗತ ಶೇಖರ್ ಪೂಜಾರಿ ಅವರಿಗೆ ಅವರ ಕುಟಂಬಸ್ತರಿಂದ ಶ್ರದ್ಧಾಂಜಲಿ ಕಾರ್ಯ ನಡೆಸಿ ಬಳಿಕ ಗಣ್ಯ ಅತಿಥಿಗಳಿಂದ ಶೇಖರ್ ಅವರ ಮಿತ್ರರಾದ ಗಣೇಶ್ ಕುಡ್ವ ಹಾಗೂ ಗಣೇಶ್ ನಾಯಕ್ ರವರ ಭಾವಚಿತ್ರಗಳನ್ನು 'ಮಿತ್ರರ ಸನ್ನಿಧಿ' ಗೆ ವರ್ಗಾವಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟಿ ಡಾ.ಡೆರಿಕ್ ಲೋಬೋ ಅವರು ನಿರ್ಗಮಿತ ಟ್ರಸ್ಟಿ ಡಾ.ಡೆಂಜಿಲ್ ಪಿಂಟೋ ಅವರನ್ನು ಸನ್ಮಾನಿಸಿದರು. ಸಂಸ್ಥೆಯ ಪ್ರಧಾನ ಟ್ರಸ್ಟಿ ಹೇಮಾಚಾರ್ಯ ಅವರು ಡಾ.ಪಿಂಟೋ ಅವರನ್ನು ಸ್ವಾಗತಿಸಿದರು.
ಡಾ.ಡೆಂಜಿಲ್ ಪಿಂಟೋ ಅವರನ್ನು ಸನ್ಮಾನಿಸಿ ಮಾತನಾಡಿದ ಟ್ರಸ್ಟಿ ಡಾ.ಡೆರಿಕ್ ಲೋಬೊ, ಹೇಮಾಚಾರ್ಯರು ನನ್ನನ್ನು ಬಹಳವಾಗಿ ಪ್ರೇರೇಪಿಸಿದ್ದಾರೆ. ಇಯಾನ್ ಕೇರ್ಸ್ ಪ್ರತಿಷ್ಠಾನದ ಮೂಲಕ ತಮ್ಮ ವೈಯಕ್ತಿಕ ದುಃಖವನ್ನು ಮೌಲ್ಯಯುತ ಸಾಮಾಜಿಕ ಉದ್ದೇಶಕ್ಕಾಗಿ ಪರಿವರ್ತಿಸಿದ್ದಾರೆ. ಯುವಕರನ್ನು ಮದ್ಯಪಾನ, ಮಾದಕ ವಸ್ತು ಸೇವನೆಯಿಂದ ಹೊರತರುವುದು ಇಯಾನ್ ಕೇರ್ಸ್ ಫೌಂಡೇಶನ್ನ ಗುರಿಯಾಗಿದೆ. "ಸಮುದಾಯ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ಜಾಗೃತಿ ಮೂಡಿಸುವುದು ನಮ್ಮ ಆದ್ಯತೆಯಾಗಿದೆ" ಎಂದು ಹೇಳಿದ್ದಾರೆ.
ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ದೇವರು ಪ್ರತಿಭೆಯನ್ನು ನೀಡಿದ್ದಾನೆ. ಆದರೆ ಕೆಲವರು ತಮ್ಮ ಪ್ರತಿಭೆಯನ್ನು ಒಳ್ಳೆಯದಕ್ಕೆ ಬಳಸಿದ್ದಾರೆ ಮತ್ತು ಕೆಲವರು ಕೆಟ್ಟ ಉದ್ದೇಶಗಳಿಗೆ ಬಳಸಿದ್ದಾರೆ. ಯುವಕರನ್ನು ಕೆಟ್ಟ ಚಟದಿಂದ ಹೊರತರುವ ಮೂಲಕ ಸಮಾಜವನ್ನು ಮುನ್ನಡೆಸಬೇಕು. ಮಾದಕ ವ್ಯಸನದಿಂದ ಯುಬಕರನ್ನು ಮುಕ್ತಗೊಳಿಸುವ ಮೂಲಕ ವ್ಯಕ್ತಿತ್ವವನ್ನು ನಿರ್ಮಿಸಲು ಈ ರೀತಿಯ ಕಾರ್ಯಕ್ರಮಗಳು ತುಂಬಾ ಉಪಯುಕ್ತವಾಗಿವೆ ಎಂದು ಹೇಳಿದ್ದಾರೆ.