ಉಡುಪಿ, ಮೇ 29 (DaijiworldNews/HR): ಪರ್ಕಳದ ರಾಷ್ಟ್ರೀಯ ಹೆದ್ದಾರಿಯ ಹಳೆಯ ರಸ್ತೆಯಲ್ಲಿ ಚಲಿಸುತ್ತಿದ್ದ ಬೃಹತ್ ಕಂಟೇನರ್ ಲಾರಿಗೆ ರಸ್ತೆಗೆ ವಾಲಿಕೊಂಡಿದ್ದ ಮರದ ಗೆಲ್ಲುತಾಗಿ ಮುರಿದು ಬಿದ್ದು ಕೆಲಹೊತ್ತು ವಾಹನ ಸಂಚಾರ ತಡೆ ಉಂಟಾಯಿತು.
ಈ ಘಟನೆ ಇಂದು ಬೆಳಿಗ್ಗೆ 8:30ರ ಸಂದರ್ಭದಲ್ಲಿ ನಡೆದಿದ್ದು, ತಕ್ಷಣ ಸ್ಥಳೀಯ ವಾಹನ ಚಾಲಕರು ಸೇರಿ ಮುರಿದ ಮರದ ಭಾಗವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇನ್ನು ಕಂಟೇನರ್ ಲಾರಿಯ ಹಿಂಬದಿ ಇದ್ದ ಕಾರಿನ ಚಾಲಕ ತಕ್ಷಣ ಗಮನಿಸಿದ್ದರಿಂದ ಅವರ ಕಾರಿನ ಮೇಲೆ ಮರ ಬೀಳುವುದು ತಪ್ಪಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಈ ಹಿಂದೆಯೂ ಇದೇ ರೀತಿ ಈ ಭಾಗದಲ್ಲಿ ಮರಗಳು ಬಿದ್ದು ರಸ್ತೆಯಲ್ಲಿ ಚಲಿಸುವ ವಾಹನ ಚಾಲಕರಿಗೆ ಅಡೆಚಣೆಯಾಗಿದೆ. ತಕ್ಷಣ ಸಂಬಂಧಪಟ್ಟ ಇಲಾಖೆಗಳು ಮಳೆಗಾಲದ ಮುನ್ನ ಪೂರ್ಣ ಪ್ರಮಾಣದಲ್ಲಿ ವಾಲಿದ ಮರವನ್ನು ರೆಂಬೆ ಕೊಂಬೆ ಗಳನ್ನು ತೆಗೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.