ಉಡುಪಿ, ಮೇ 29 (DaijiworldNews/HR): ಸರಕಾರ ರಚಿಸಿ ಖಾತೆ ಹಂಚಿಕೆ ಯಾಗುವ ಮೊದಲೆ ಜಿಲ್ಲಾ ಬಿಜೆಪಿ ಅಧ್ಯಕ್ಷರು ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸದಿದ್ದರೆ ಜೂ. 1 ರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ ಎನ್ನುವ ಹೇಳಿಕೆ ಅವರ ಹತಾಶ ಭಾವನೆಯನ್ನು ಬಿಂಬಿಸುತ್ತದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಸರಕಾರ ಮೊದಲ ಕ್ಯಾಬಿನೆಟ್ ಸಭೆಯಲ್ಲಿಯೇ ಪಕ್ಷದ ಐದು ಗ್ಯಾರಂಟಿ ಯೋಜನೆಗಳಗೆ ತಾತ್ವಿಕ ಒಪ್ಪಿಗೆ ನೀಡಿರುವಾಗ ಬಿಜೆಪಿಯ ಈ ಹೇಳಿಕೆ ಜನರನ್ನು ತಪ್ಪು ದಾರಿಗೆ ಎಳೆಯುವ ಷಡ್ಯಂತರವಾಗಿದೆ. ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗಲೇ ಇದು ಬೋಗಸ್, ಜನಮರಳು ಯೋಜನೆ ಎಂದು ಬೊಬ್ಬಿಟ್ಟವರು ಈಗ ಅನುಷ್ಠಾನಗೊಳಿಸದಿದ್ದರೆ ಹೋರಾಟ ಎನ್ನುವ ಹಂತ ತಲುಪಿರುವುದು ವಿಪರ್ಯಾಸ ಎಂದರು.
ಇನ್ನು ಬಿಜೆಪಿ ಸರಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಕಾರ್ಯಗತಗೊಳಿಸದೆ ಜನರನ್ನು ಯಾಮಾರಿಸಿಲ್ಲವೇ, ಬಿಜೆಪಿ ಜನರ ಖಾತೆಗೆ 15 ಲಕ್ಷ ಹಾಕುವ ಭರವಸೆ ನೀಡಿ ಜನರಿಗೆ ಮೋಸ ಮಾಡಿಲ್ಲವೇ ವರ್ಷಕ್ಕೆ ಎರಡು ಲಕ್ಷ ಉದ್ಯೋಗ, ವಸತಿ ನಿರ್ಮಾಣ ಯೋಜನೆಗಳ ಆಶ್ವಾಸನೆ ನೀಡಿ ವಂಚಿಸಿಲ್ಲವೆ ಈಗ ಪ್ರತಿಭಟನೆ ಮಾಡುತ್ತೇವೆ ಎಂದು ಬೆದರಿಸುವ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ತಮ್ಮ ಪಕ್ಷ ಪ್ರಣಾಳಿಕೆಯಲ್ಲಿ ಜನತೆಗೆ ನೀಡಿದ ಭರವಸೆಗಳ ಬಗ್ಗೆ ಮಾತನಾಡುವುದಿಲ್ಲವೇಕೆ ನೀವು ನೀಡಿದ ಭರವಸೆಗಳನ್ನು ಈಡೇರಿಸದೆ ಇರುವಾಗ ಬೇರೆಯವರು ನೀಡಿದ ಭರವಸೆಗಳ ಬಗ್ಗೆ ನಿಮಗೆ ಹೋರಾಟ ಮಾಡುವ ನೈತಿಕತೆ ಉಳಿದಿದೆಯೆ ಎಂಬುದನ್ನು ವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಗ್ಯಾರೆಂಟಿ ಯೋಜನೆ ಜಾರಿ ಮಾಡುವ ಬಗ್ಗೆ ನನಗೆ ಗ್ಯಾರಂಟಿ ಇದೆ ಎಂದು ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಜಿಲ್ಲೆಯ ಬಿಜೆಪಿ ಮುಖಂಡರು ಕಳಿಯಬೇಕಾಗಿದೆ. ಬಿಜೆಪಿ ಮುಖಂಡರು ಪದೇ ಪದೆ ಆರ್ಎಸ್ಎಸ್ ಬ್ಯಾನ್ ಮಾಡಿ ನೊಡಿ ಎಂದು ಸವಾಲ್ ಹಾಕುತ್ತಿದ್ದಾರೆ. ಆದರೆ ಸಂಘ ಪರಿವಾರ ನಿಷೇಧಿಸಲಾಗುವುದು ಎಂದು ಸರಕಾರ ಎಲ್ಲಿಯೂ ಹೇಳಿಲ್ಲ. ಆದರೆ ಸಂಘಟನೆ ಸಮಾಜದಲ್ಲಿ ಶಾಂತಿ-ಸಾಮರಸ್ಯ ಕದಡುವ ಕೆಲಸ ಮಾಡಿದರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಮುಖ್ಯಮಂತ್ರಿ ಹೇಳಿಕೆಗೆ ಬಿಜೆಪಿ ಮುಖಂಡರು ತಲ್ಲಣಗೊಂಡಿರುವುದು ಯಾಕಾಗಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಹೇಳಿಕೆಗೆ ಅಶೋಕ್ ಕುಮಾರ್ ಕೊಡವೂರು ಪ್ರತಿಕ್ರಿಯಿಸಿದ್ದಾರೆ.