ಉಡುಪಿ, ಮೇ 28 (DaijiworldNews/SM): “ಆಧುನಿಕ ಕಾಲದಲ್ಲಿ ಮಾಧ್ಯಮ ಮನುಷ್ಯನ ಜೀವನದ ಮೇಲೆ ಅಗಾಧ ಪರಿಣಾಮ ಬೀರುತ್ತಿದೆ. ಮಾಧ್ಯಮಗಳಿಂದ ದೂರವಿರದೆ, ಅವುಗಳ ಮೂಲಕ ನಮ್ಮ ಒಳ್ಳೆಯ ಚಿಂತನೆಗಳನ್ನು ಹಾಗೂ ಸಮಾಜಮುಖಿ ಕರ್ಯಚಟುವಟಿಕೆಗಳನ್ನು ಇನ್ನಷ್ಟು ಪ್ರಚುರಗೊಳಿಸಿ, ಸಮಾಜಕ್ಕೆ ಸುಸಂದೇಶವನ್ನು ಮತ್ತು ಸತ್ಯವನ್ನು ತಲುಪಿಸಬೇಕಾದ ಅಗತ್ಯವಿದೆ. ಉಡುಪಿ ಧರ್ಮಪ್ರಾಂತ್ಯದ ಮಟ್ಟದಲ್ಲಿ ಇಂದಿನ ಮಾಧ್ಯಮ ಕಾರ್ಯಾಗಾರ ಒಂದು ಮಹತ್ತರ ಹೆಜ್ಜೆ” ಎಂದು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಟಗುರು ಅತಿ ವಂದನೀಯ ಫಾದರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಇವರು ನುಡಿದರು.
ಉಡುಪಿ ಧರ್ಮಪ್ರಾಂತ್ಯ, ದೀಪಾ ಟ್ರಸ್ಟ್, ಉಜ್ವಾಡ್ ಕೊಂಕಣಿ ಪಾಕ್ಷಿಕ, ಸಾಮಾಜಿಕ ಸಂಪರ್ಕ ಆಯೋಗ ಮತ್ತು ಸಿಗ್ನಿಸ್ ಇಂಡಿಯಾ ವತಿಯಿಂದ ಅಂಬಾಗಿಲು ಬಳಿಯ ಅನುಗ್ರಹ ಪಾಲನಾ ಕೇಂದ್ರದಲ್ಲಿ ನಡೆದ ‘ಚರ್ಚ್ ಮತ್ತು ಮಾಧ್ಯಮ’ ಎಂಬ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ತಮ್ಮ ಸಂದೇಶವನ್ನು ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಧರ್ಮಪ್ರಾಂತ್ಯದ ಕುಲಪತಿ ಅತಿ ವಂದನೀಯ ಡೊ. ರೋಶನ್ ಡಿಸೋಜಾರವರು, “ಇದು ಮಾಧ್ಯಮದ ಯುಗವಾಗಿದ್ದು, ಕಥೊಲಿಕ್ ಧರ್ಮಸಭೆ ಇದರಿಂದ ಹೊರತಾಗಿರುವುದು ಸಾಧ್ಯವಿಲ್ಲ. ಧರ್ಮಸಭೆಯು ನಡೆಸುವ ಕಾರ್ಯಕ್ರಮಗಳು ಮಾಧ್ಯಮಗಳಲ್ಲಿ ಕಾಣಲು ಸಿಗುವುದು ವಿರಳ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಮಾಧ್ಯಮದ ಮೂಲಕ ಸಾವಿರಾರು ಜನರನ್ನು ಸುಲಭವಾಗಿ ಸಂಪರ್ಕಿಸುತ್ತವೆ. ಧರ್ಮಸಭೆ ಮಾಧ್ಯಮದಲ್ಲಿ ತಮ್ಮ ಇರುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ನೀಡುವಂತಾಗಬೇಕು” ಎಂದು ನುಡಿದರು.
ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂದನೀಯ ಫಾದರ್ ಡೆನಿಸ್ ಡೆಸಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸಂದೇಶ ಫೌಂಡೇಶನ್ ಮಂಗಳೂರು ಇದರ ನಿರ್ದೇಶಕರಾದ ಫಾದರ್ ಸುದೀಪ್ ಪೌಲ್, ಕೆಪಿಎಸ್ಸಿ ಸದಸ್ಯರಾದ ಡೊ. ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ವಾರ್ತಾ ಇಲಾಖೆಯ ಸಹಾಯಕ ಆಯುಕ್ತೆ ರೋಹಿಣಿ ಉಪಸ್ಥಿತರಿದ್ದರು.