ಮಂಗಳೂರು, ಮಾ 30(MSP): ಕಾಂಗ್ರೆಸ್ ಅಧಿಕಾರ ನೀಡಿ ದೆಹಲಿಗೆ ಕಳುಹಿಸಿದ್ರೆ, ಬಿಜೆಪಿ ಬಿಲ್ಲವರ ಕೈಗೆ ಕತ್ತಿಕೊಟ್ಟು ಜೈಲಿಗಟ್ಟುತ್ತೆ ,ಚುನಾವಣೆಯಲ್ಲಿ ಗೆಲ್ಲಲೆಂದು ಬಿಜೆಪಿಯವರು ಜಾತಿ ರಾಜಕಾರಣ ಮಾಡುತ್ತಿದ್ದು, ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಬಂಟ ಸಂಘದ ಅಧ್ಯಕ್ಷರ ಹೆಸರನ್ನು ಪೋರ್ಜರಿ ಮಾಡಿದ್ದಾರೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದಾರೆ.
ಈ ಬಗ್ಗೆ ಮಾ.30ರ ಶನಿವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ಕುಮಾರ್ ರೈ ಪೊಲೀಸರಿಗೆ ಅವರ ಹೆಸರು ದುರುಪಯೋಗ ಮಾಡಿರುವ ಬಗ್ಗೆ ದೂರು ನೀಡಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ನ ಪಾತ್ರವಿಲ್ಲ. ಬಿಜೆಪಿಯೂ ಜನಾರ್ದನ ಪೂಜಾರಿ ಬಗ್ಗೆ ಮಾತನಾಡುವಾಗ ಅವರದೇ ಪಕ್ಷದ ಆಡ್ವಾಣಿ ಬಗ್ಗೆ ಮಾತ್ರ ಮಾತನಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಮಾಧ್ಯಮವನ್ನು ದುರುಪಯೋಗ ಪಡಿಸಿದ್ದಾರೆ ಎನ್ನುವ ಬಿಜೆಪಿಯ ವಾದ ಸರಿಯಲ್ಲ. ಬಿಜೆಪಿಗೆ ವಿರುದ್ಧವಾಗಿ ಸುದ್ದಿ, ಮಾಧ್ಯಮಗಳಲ್ಲಿ ಪ್ರಕಟವಾದರೆ ಅದಕ್ಕೆ ಕಾಂಗ್ರೆಸ್ ನ್ನು ದೂರುವುದು ಸರಿಯಲ್ಲ. ಜಾತಿ ರಾಜಕಾರಣ ಮಾಡುವ ಬಿಜೆಪಿಗರು ಬಿಲ್ಲವ ಸಮುದಾಯದ ಬಗ್ಗೆ ಕಾಳಜಿಯಿಂದ ಮಾತನಾಡುತ್ತಾರೆ. ಆದರೆ ಬಿಜೆಪಿಗರು ಬಿಲ್ಲವ ಸಮುದಾಯದ ಯುವಕರ ಕೈಗೆ ಕತ್ತಿಕೊಟ್ಟು ಕೊಲೆಯಂತಹ ಕೃತ್ಯ ಮಾಡಿಸಿದ್ದಾರೆ. ಇದರ ಪರಿಣಾಮ ಇಂದು ಜೈಲಿನಲ್ಲಿ ಶೇಕಡಾ 80 ರಷ್ಟು ಬಿಲ್ಲವ ಯುವಕರಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಬಿಲ್ಲವರನ್ನು ಪಾರ್ಲಿಮೆಂಟ್ ಗೆ ಕಳುಹಿಸಿದ ಪಕ್ಷ ಎಂದು ನೆನಪಿರಲಿ ಎಂದರು. ಇನ್ನು ವಿಜಯಾ ಬ್ಯಾಂಕ್ ಇತಿಹಾಸದ ಪುಟ ಸೇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ಏಪ್ರಿಲ್ 1 ರಂದು ಕರಾಳ ದಿನ ಆಚರಿಸುತ್ತೇವೆ. ಕಾಂಗ್ರೆಸ್ ಸರ್ಕಾರ ಬಂದರೆ ವಿಜಯಾ ಬ್ಯಾಂಕ್ ಹೆಸರು ಉಳಿಸುತ್ತೇವೆ ಎಂದು ಅಶ್ವಾಸನೆ ನೀಡಿದರು.