ಕುಂದಾಪುರ,ಮೇ 28 (DaijiworldNews/KH): ಕುಂದಾಪುರದಲ್ಲಿ ಹೆದ್ದಾರಿ ಕಾಮಗಾರಿಯ ಗೋಳು ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕುಂದಾಪುರ ಹೃದಯ ಭಾಗದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ರಸ್ತೆಯ ನಡುವೆಯಲ್ಲಿ ನಿರ್ಮಾಣ ಮಾಡಲಾದ ಚರಂಡಿಗೆ ಹಾಕಲಾದ ಸ್ಲ್ಯಾಬ್ ಮುರಿದು ಹೋಗುವ ಮೂಲಕ ಕಳಪೆ ಕಾಮಗಾರಿಯ ಆಕ್ರೋಶ ಕೇಳಿ ಬಂದಿದೆ.
ಕುಂದಾಪುರ ಶಾಸ್ತ್ರೀವೃತ್ತದ ಬಳಿ ಹೆದ್ದಾರಿಯ ಸರ್ವೀಸ್ ರಸ್ತೆಯ ನಡುವೆ ನಿರ್ಮಿಸಲಾದ ಚರಂಡಿಯ ಸ್ಲ್ಯಾಬ್ ಮುರಿದು ಹೋಗಿದ್ದು ವಾರಗಳೇ ಕಳೆದರೂ ಕೂಡಾ ಸಂಬಂಧಪಟ್ಟವರು ಈ ಬಗ್ಗೆ ಗಮನವನ್ನೇ ಹರಿಸಿಲ್ಲ. ಮುಖ್ಯರಸ್ತೆಯಲ್ಲಿ ಚರಂಡಿ ಬಾಯಿ ತೆರೆದುಕೊಂಡು ಅಪಾಯವನ್ನು ಆಹ್ವಾನಿಸುತ್ತಿದ್ದರೂ ಕೂಡಾ ಸಂಬಂಧಪಟ್ಟವರು ದಿವ್ಯ ನಿರ್ಲಕ್ಷ್ಯ ಹೊಂದಿದ್ದಾರೆ.
ಕುಂದಾಪುರಕ್ಕೆ ಉಡುಪಿ ಕಡೆಯಿಂದ ಪ್ರವೇಶ ಪಡೆಯುವ ಸರ್ವೀಸ್ ರಸ್ತೆಗೆ ಕುಂದಾಪುರ ಗಾಂಧೀ ಮೈದಾನ ಸಮೀಪದಿಂದ ಚರಂಡಿಯ ನೀರು ಹರಿದು ಹೋಗುವಂತೆ ಮುಖ್ಯರಸ್ತೆಯ ನಡುವೆಯೇ ಶಾಸ್ತ್ರೀವೃತ್ತದ ಬಳಿಯಿಂದ ಜೆ.ಕೆ ಟವರ್ ಬಳಿಯ ಚರಂಡಿಗೆ ಸಂಪರ್ಕ ಕಲ್ಪಿಸಲು ಹೊಸತಾಗಿ ಚರಂಡಿ ನಿರ್ಮಿಸಿ ಸ್ಲ್ಯಾಬ್ ಹಾಕಲಾಯಿತು. ಇದಾಗಿ ಎರಡು ಮೂರು ತಿಂಗಳಾಗಿದೆ ಅಷ್ಟೆ. ಮಳೆಯೂ ಕೂಡಾ ಆರಂಭವಾಗಿಲ್ಲ. ಚರಂಡಿಯಲ್ಲಿ ನೀರು ಕೂಡಾ ಹರಿದು ಹೋಗಿಲ್ಲ. ಚರಂಡಿಗೆ ಮುಚ್ಚಲಾಗಿದ್ದ ಸ್ಲ್ಯಾಬ್ ಕುಸಿದು ಹೋಗಿ ಕಾಮಗಾರಿಯ ಬಣ್ಣ ಬಯಲಾಗಿದೆ. ಕುಂದಾಪುರ ನಗರಕ್ಕೆ ಪ್ರವೇಶ ಪಡೆಯುವ ಮುಖ್ಯರಸ್ತೆಯ ನಡುವೆಯೇ ಚರಂಡಿ ಸ್ಲ್ಯಾಬ್ ಕುಸಿದು ಹೋಗಿದ್ದರೂ ಕೂಡ ತಕ್ಷಣ ಸ್ಪಂದಿಸುವ ಕೆಲಸ ಇಲಾಖೆಯೂ ಮಾಡಿಲ್ಲ, ನವಯುಗ ಸಂಸ್ಥೆಯೂ ಕೂಡಾ ಮಾಡಿಲ್ಲ. ಪ್ರಾರಂಭದ ಒಂದು ಸ್ಲ್ಯಾಬ್ ಮುರಿದು ಹೋಗಿ ತಿಂಗಳಾಗುತ್ತ ಬಂದಿದೆ. ಮತ್ತೆ ಅಲ್ಲಿಯೇ ಸಮೀಪದಲ್ಲಿ ಇನ್ನೊಂದು ಸ್ಲ್ಯಾಬ್ ಮುರಿದು ಹೋಗಿದೆ. ಅಲ್ಲಿ ಸ್ಥಳೀಯ ಗೂಡ್ಸ್ ವಾಹನದವರು ಬ್ಯಾರಿಕೇಡ್ಗಳ ಅಡ್ಡ ಇಟ್ಟು ವಾಹನ ಸವಾರಿಗೆ ಅಪಾಯದ ಸೂಚನೆ ನೀಡಿದ್ದಾರೆ ಬಿಟ್ಟರೆ ಸಂಬಂಧಪಟ್ಟವರು ಮಾತ್ರ ಈ ಕಡೆ ತಲೆ ಹಾಕಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.
ಮುಖ್ಯರಸ್ತೆಯ ನಡುವೆಯೇ ಚರಂಡಿ ಮಾಡಿ ಗುಣಮಟ್ಟದ ಕಾಮಗಾರಿ ನಿರ್ವಹಿಸದ ಬಗ್ಗೆ ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆರು ತಿಂಗಳ ಒಳಗೆ ಸ್ಲ್ಯಾಬ್ ಬಿಚ್ಚಿಕೊಳ್ಳುತ್ತಿದೆ. ಜಲ್ಲಿ ಮರಳು ಬೇರೆಬೇರೆ ಆಗುತ್ತಿದೆ. ಘನವಾಹನಗಳು ಸಂಚರಿಸು ನಿಬಿಡವಾದ ಈ ರಸ್ತೆಯಲ್ಲಿ ಬೆಜಬ್ದಾರಿಯುತ ಕಾಮಗಾರಿ ಮಾಡಲಾಗಿದ್ದು ವಾಹನ ಸಂಚರಿಸುವಾ ಸ್ಲ್ಯಾಬ್ ಮುರಿದು ಹೋದರೆ ಸಂಭವಿಸಬಹುದಾದ ಅನಾಹುತಕ್ಕೆ ಜವಬ್ದಾರಿ ಯಾರು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಚರಂಡಿಗೆ ಹಾಕಲಾದ ಮುಚ್ಚಿಗೆ ಮುರಿದು ಹೋಗಿ ಇಷ್ಟೊಂದು ದಿನವಾದರೂ ಯಾರೂ ಕೂಡಾ ಸ್ಥಳಕ್ಕೆ ಬಂದಿಲ್ಲ. ತಕ್ಷಣ ಮುಂಜಾಗೃತ ಕ್ರಮವನ್ನೂ ಕೈಗೊಂಡಿಲ್ಲ. ದ್ವಿಚಕ್ರವಾಹನದವರು ಹೊಂಡಕ್ಕೆ ಬಿದ್ದರೆ ಪ್ರಾಣಾಪಾಯ ಸಂಭವಿಸಲಿದೆ. ಪಾದಾಚಾರಿಗಳು, ವಿದ್ಯಾರ್ಥಿಗಳು ಅರಿಯದೆ ಕಾಲು ಹಾಕಿದರೂ ಕಾಲು ಮುರಿದು ಹೋಗುತ್ತದೆ. ತಕ್ಷಣ ಸ್ಪಂದಿಸುವ ಕೆಲಸ ಆಗಬೇಕು - ಪ್ರಕಾಶ ಡಿಸೋಜ, ಸ್ಥಳೀಯ ಗೂಡ್ಸ್ ವಾಹನ ಚಾಲಕ.