ಕುಂದಾಪುರ, ಮೇ 27(DaijiworldNews/HR): ಕೇವಲ 1 ರೂಪಾಯಿಯಲ್ಲಿ 10 ಕಿಲೋ ಮೀಟರ್ ತನಕ ರಿಕ್ಷಾಯಾನ! ಹತ್ತು ದಿನಗಳ ಕಾಲ ತನ್ನ ರಿಕ್ಷಾದಲ್ಲಿ ಪಯಾಣಿಸುವವರಿಗೆ ವಿಶೇಷ ಅವಕಾಶವನ್ನು ಕುಂದಾಪುರದ ರಿಕ್ಷಾ ಚಾಲಕ ಸತೀಶ್ ಪ್ರಭು ನೀಡಿದ್ದಾರೆ.
ಮೋದಿ ಪ್ರಧಾನಿಯಾಗಿ 10ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಮೇ.26ರಿಂದ ಜೂನ್ 4ರ ತನಕ ಹತ್ತು ದಿನಗಳ ಕಾಲ 10 ಕಿ.ಮೀ ತನಕ ಕೇವಲ 1 ರೂಪಾಯಿ ಬಾಡಿಗೆಯಲ್ಲಿ ಪಯಣಿಸಬಹುದಾದ ವಿಶೇಷ ಅವಕಾಶವನ್ನು ರಿಕ್ಷಾ ಪ್ರಯಾಣಿಕರಿಗೆ ನೀಡಿದ್ದಾರೆ.
ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಒಂದು ವರ್ಷ ಪೂರೈಸಿದ ಸಂದರ್ಭ ಒಂದು ದಿನ 1 ರೂಪಾಯಿ ಬಾಡಿಗೆ ಘೋಷಣೆ ಮಾಡಿದರು. ಬಳಿಕ 2ನೇ ವರ್ಷಕ್ಕೆ 2 ದಿನ ಹೀಗೆ ಮುಂದುವರಿಸಿಕೊಂಡು ಬಂದರು. ಈ ವರ್ಷ ನರೇಂದ್ರ ಮೋದಿ ಪ್ರಧಾನಿಯಾಗಿ 10ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ 10 ದಿನಗಳ ಕಾಲ, 10 ಕಿಲೋ ಮೀಟರ್ ತನಕ ಒಂದು ರೂಪಾಯಿ ಬಾಡಿಗೆಯಲ್ಲಿ ರಿಕ್ಷಾಯಾನದ ಸೇವೆ ನೀಡಿದ್ದಾರೆ.
ರಿಕ್ಷಾ ನಮೋ ಎಂದೇ ನಾಮಕರಣ ಮಾಡಿರುವ ಇವರು, ರಿಕ್ಷಾದಲ್ಲಿಯೇ ಒಂದು ಡಬ್ಬ ಇಟ್ಟಿದ್ದು ಪ್ರಯಾಣಿಕರು ಪ್ರಯಾಣದ ಬಳಿಕ ಡಬ್ಬಕ್ಕೆ ಒಂದು ರೂ.ನಾಣ್ಯ ಹಾಕಬಹುದಾಗಿದೆ. ಈ ಬಗ್ಗೆ ರಿಕ್ಷಾದ ಹಿಂಭಾಗದಲ್ಲಿ ಮೋದಿಯವರ ಫಲಕವನ್ನು ಅಳವಡಿಸಿಕೊಂಡಿದ್ದಾರೆ.