ಮಂಗಳೂರು, ಮೇ 27(DaijiworldNews/HR): ಪ್ರವೀಣ್ ನೆಟ್ಟಾರ್ ಪತ್ನಿಯ ಉದ್ಯೋಗದ ಬಗ್ಗೆ ಬಿಜೆಪಿಯವರು ಕೀಳುಮಟ್ಟದ ರಾಜಕೀಯ, ನಾಟಕ ಮಾಡುವುದನ್ನು ನಿಲ್ಲಿಸಲಿ. ಇವರ ಇಂತಹ ಕಪಟ ನಾಟಕ ಸಾಮಾನ್ಯ ಜನತೆಗೆ ಈಗಾಗಲೇ ತಿಳಿದಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಪ್ರವೀಣ್ ನೆಟ್ಟಾರ್ ಅವರ ಪತ್ನಿಗೆ ಮುಖ್ಯಮಂತ್ರಿಯವರ ವಿಶೇಷ ಅಧಿಕಾರ ಬಳಸಿ ಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಿದ್ದಾರೆ. ಸರ್ಕಾರ ಬದಲಾದಾಗ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದಾಗುತ್ತವೆ ಎನ್ನುವುದು ಬಿಜೆಪಿಯ ಶಾಸಕರು, ಸಂಸದರಿಗೆ ಸಾಮಾನ್ಯ ತಿಳಿವಳಿಕೆಯೂ ಇಲ್ಲವೆ? ಅದೇ ರೀತಿ ನೂತನ ಅವರ ಕೆಲಸವೂ ರದ್ದಾಗಿದೆ. ಬಿಜೆಪಿಯವರಿಗೆ ನೂತನ ಕುಮಾರಿಯವರ ಮೇಲೆ ಅಷ್ಟೊಂದು ಅಭಿಮಾನ ಇರುತ್ತಿದ್ದರೆ ಈ ಮೊದಲೇ ಯಾಕೆ ಅವರಿಗೆ ಶಾಶ್ವತ ಉದ್ಯೋಗ ಮಾಡಿಸಿಕೊಡಲು ಪ್ರಯತ್ನಿಸಿಲ್ಲ. ಅವರು ಇಷ್ಟು ದಿನವೂ ಮಾಡಿದ್ದೆಲ್ಲ ನಾಟಕ ಎಂದು ಇದರಿಂದ ಬಹಿರಂಗವಾಗಿದೆ ಎಂದರು.
ಇನ್ನು ಪ್ರವೀಣ್ ನೆಟ್ಟಾರ್ ಪತ್ನಿ ನೂತನ ಅವರಿಗೆ ಉದ್ಯೋಗ ನೀಡಲು ಕಾಂಗ್ರೆಸ್ ನೇತೃತ್ವದ ಸರ್ಕಾರ ಖಂಡಿತವಾಗಿಯೂ ಬದ್ಧವಾಗಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಪರವಾಗಿ ನೂತನ ಅವರಲ್ಲಿ ಮಾತುಕತೆ ನಡೆಸಿದ್ದೇವೆ. ಕೂಡಲೇ ಅವರಿಗೆ ಉದ್ಯೋಗ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು. ಬಿಜೆಪಿಯವರು ಕೀಳುಮಟ್ಟದ ರಾಜಕೀಯದ ಮೂಲಕ ಜನರನ್ನು ಮತ್ತೆ ಮೂರ್ಖರನ್ನಾಗಿಸುವ ಕೆಲಸವನ್ನು ಬಿಡಲಿ. ಇಂತಹ ಕೀಳು ರಾಜಕೀಯ ಮುಂದೆ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ.