ಕುಂದಾಪುರ, ಮೇ 26 (DaijiworldNews/HR): 6 ಸೆಮಿಸ್ಟರ್ಗಳ ಅಂಕಪಟ್ಟಿಗಳನ್ನು ಪರಿಶೀಲಿಸಲು 9 ಸಾವಿರ ರೂ. ಮೂಲ ಶುಲ್ಕ ಹಾಗೂ ಇತರ ಶುಲ್ಕ ಸೇರಿ ಒಟ್ಟು 10,800 ರೂ. ಪಡೆಯುತ್ತಿದ್ದ ಮಂಗಳೂರು ಯೂನಿವರ್ಸಿಟಿ ಕುಲಪತಿಗಳು ಶಾಸಕ ಗುರುರಾಜ್ ಗಂಟಿಹೊಳೆಯವರ ಟ್ವೀಟ್ ಗೆ ಸ್ಪಂದಿಸಿದಕ್ಕಾಗಿ ಶಾಸಕ ಗುರುರಾಜ್ ಗಂಟಿಹೊಳೆ ಧನ್ಯವಾದ ಹೇಳಿದ್ದಾರೆ.
ಬೈಂದೂರಿನಲ್ಲಿ ಮಾತನಾಡಿದ ಅವರು, ಮಂಗಳೂರು ವಿ.ವಿ.ಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಸೇರಿದಂತೆ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಅಂಕಪಟ್ಟಿ ಪರಿಶೀಲನೆಯ ಶುಲ್ಕ ಹೊರೆಯಾಗಿತ್ತು ಎಂದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಂಕಪಟ್ಟಿ ಶುಲ್ಕ ಪರಿಷ್ಕರಣೆ ಬಗ್ಗೆ ಮಂಗಳೂರು ವಿ.ವಿ.ಯ ಉಪ ಕುಲಪತಿಗಳು ಉತ್ತಮ ನಿರ್ಧಾರವನ್ನು ಕೈಗೊಂಡು, ಕರಾವಳಿ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ನನಗೆ ಹಲವರು ಕರೆ ಮಾಡಿ ಧನ್ಯವಾದ ಹೇಳುತ್ತಿದ್ದಾರೆ. ಆದರೆ ನಾನು ಯೂನಿವರಗಸಿಟಿಯ ವಿ.ಸಿ. ಯಡಪಡಿತ್ತಾಯ ಸರ್ ಗೆ ಧನ್ಯವಾದ ಹೇಳುತ್ತಿದ್ದೇನೆ ಎಂದ ಗಂಟಿಹೊಳೆ, ಉತ್ತಮ ಮೌಲ್ಯಾಧಾರಿತ ಶಿಕ್ಷಣದಿಂದ ನವ ಸಮಾಜದ ನಿರ್ಮಾಣವಾಗುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಣ ಗ್ರಾಮೀಣ ವಿದ್ಯಾರ್ಥಿಗಳ ಕೈಗೆಟುಕುವಂತಾಗಬೇಕು ಎಂದಿದ್ದಾರೆ.
ಶಾಸಕರ ಮನವಿಗೆ ಸ್ಪಂದಿಸಿದ ಮಂಗಳೂರು ವಿಶ್ವವಿದ್ಯಾಲಯ ಪ್ರತಿ ವಿಷಯದ ಅಂಕಪಟ್ಟಿಯ ಮೇಲೆ ರೂ.500 ಕಡಿಮೆ ಮಾಡಿದೆ. ಶುಲ್ಕ ಇಳಿಕೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಶಾಸಕರಾಗಿ ಹದಿನೈದು ದಿನದಲ್ಲೆ ಸಾವಿರಾರು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿರುವುದು ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿಸಿದೆ.