ಬಂಟ್ವಾಳ, ಮೇ 26 (DaijiworldNews/HR): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 24 ಕೊಲೆ ಆರೋಪ ಹೊರಿಸಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹಾಳುಗೆಡವಲು ಸಂಚು ಮಾಡಿದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್ ಒತ್ತಾಯಿಸಿದ್ದಾರೆ.
ಮೇ. 22 ರಂದು ಬೆಳ್ತಂಗಡಿಯಲ್ಲಿ ನಡೆದ ವಿಜಯೋತ್ಸವದ ಸಾರ್ವಜನಿಕ ಸಭೆಯಲ್ಲಿ ಶಾಸಕ ಹರೀಶ್ ಪೂಂಜಾ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರವರು 24 ಹಿಂದು ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ ಎಂದು ಅವಹೇಳನಕಾರಿ ಮತ್ತು ಸುಳ್ಳು ಆರೋಪವನ್ನು ಮಾಡಿದ್ದು, ಪ್ರಚೋದನಕಾರಿ ಭಾಷಣದ ಮೂಲಕ ಬೆಳ್ತಂಗಡಿಯ ಸಮೀಪದ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಬಂಟ್ವಾಳದಲ್ಲಿ ಕೂಡ ಆಶಾಂತಿ, ಗಲಭೆ ಸೃಷ್ಟಿಸುವ ಸಂಚು ರೂಪಿಸಿದ್ದಾರೆ. ಮಾತ್ರವಲ್ಲದೆ ಕರ್ನಾಟಕದ ಜನಹಿತ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯರವರ ಗಣತೆ ಮತ್ತು ಗೌರವಕ್ಕೆ ಚ್ಯುತಿ ತಂದಿದ್ದಾರೆ. ಈ ಮೂಲಕ ಮುಖ್ಯ ಮಂತ್ರಿಗಳ ಬಗ್ಗೆ ಸಮಾಜದಲ್ಲಿ ಅವಿಶ್ವಾಸ ಮತ್ತು ಅಪನಂಬಿಕೆಯನ್ನು ಉಂಟು ಮಾಡಲು ಪ್ರಯತ್ನಿಸಿದ್ದಾರೆ. ಸದ್ಯ ಹರೀಶ ಪೂಂಜಾರವರು ಮುಖ್ಯ ಮಂತ್ರಿಗಳ ವಿರುದ್ಧ ಬಹಿರಂಗ ಸಭೆಯಲ್ಲಿ ಮಾಡಿರುವ ಸುಳ್ಳು ಆರೋಪಗಳು ಕಾನೂನಿನ ಉಲ್ಲಂಘನೆಯಾಗಿದ್ದು, ಮತ್ತು ಸಂವಿಧಾನ ವಿರುದ್ಧವಾಗಿರುತ್ತದೆ. ಆದುದರಿಂದ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.