ಮಂಗಳೂರು, ಮೇ 26 (DaijiworldNews/HR): ಕಂಕನಾಡಿ ನಗರ ಠಾಣೆ ಪೊಲೀಸರು ಫೈಸಲ್ ನಗರದ ನೇತ್ರಾವತಿ ನದಿ ಕಿನಾರೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ 10 ಲೋಡ್ ಮರಳು, ಒಂದು ಜೆಸಿಬಿಯನ್ನು ವಶಕ್ಕೆ ಪಡೆದುಕೊಂಡಿದ್ದು, ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ ಒಟ್ಟು 3.70 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಕಂಕನಾಡಿ ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕಿ ಜ್ಯೋತಿ ಎನ್.ಎ. ಅವರು ರಾತ್ರಿ ರೌಂಡ್ಸ್ನಲ್ಲಿದ್ದ ವೇಳೆ ಗುರುವಾರ ಮುಂಜಾನೆ 3 ಗಂಟೆ ವೇಳೆಗೆ ಫೈಸಲ್ ನಗರದ ನೇತ್ರಾವತಿ ನದಿ ಕಿನಾರೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇನ್ನು ಬೆಳ್ಳಗ್ಗೆ ಸುಮಾರು 3.20ಕ್ಕೆ ಸಿಬಂದಿಯೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದಾಗ ಸ್ಥಳದಲ್ಲಿ 2 ಯುನಿಟ್ನ 5 ಲೋಡ್ ಮರಳು ದಾಸ್ತಾನು ಇರಿಸಿದ್ದು ಪತ್ತೆಯಾಗಿದ್ದು, ಜೆಸಿಬಿಯೂ ಕಂಡುಬಂದಿದೆ.
ಪೊಲೀಸರನ್ನು ಕಂಡು ಜೆಸಿಬಿಯನ್ನು ಚಾಲಕ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ನದಿ ಕಿನಾರೆಯಿಂದ ಸುಮಾರು 500 ಮೀ. ದೂರದಲ್ಲಿ ಖಾಲಿ ಜಾಗದಲ್ಲಿ ಮತ್ತೆ 5 ಲೋಡ್ ಮರಳು ದಾಸ್ತಾನು ಇರಿಸಿರುವುದು ಪತ್ತೆಯಾಗಿದೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.