ಮಣಿಪಾಲ, ಮಾ30(SS): ನಾನು ಶಾಸಕನಾಗಿ ಹೇಗೆ ಕೆಲಸ ಮಾಡಿದ್ದೇನೆ ಎಂಬುದು ನಿಮಗೆ ಗೊತ್ತಿದೆ. ನಾನು ಗೆದ್ದು ಬಂದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕನಾಗಿ ದುಡಿಯುವೆ ಎಂದು ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಹೆಚ್ಚಿನ ಪ್ರಮಾಣದಲ್ಲಿ ಕೇಂದ್ರ ಸರಕಾರದ ಅನುದಾನವನ್ನು ಕ್ಷೇತ್ರಕ್ಕೆ ತಂದು ಅಭಿವೃದ್ಧಿ ಗೊಳಿಸಲಿದ್ದೇನೆ. ನಾನು ಶಾಸಕನಾಗಿ ಕೆಲಸ ಮಾಡಿಯೂ ಸೋತಿದ್ದೇನೆ. ಪ್ರಾಮಾಣಿಕನಾಗಿ ಕೆಲಸ ಮಾಡಿದ ನನಗೆ ಅದರಿಂದ ಬೇಸರ ಇಲ್ಲ. ಪ್ರಥಮ ಬಾರಿಗೆ ಶಾಸಕನಾದ ಮೇಲೆ ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿಯಾದೆ, ಸಹಾಯಕ ಮಂತ್ರಿಯಾದೆ, ಕ್ಯಾಬಿನೆಟ್ ಮಂತ್ರಿಯಾದೆ. ರಾಜ್ಯದ ಇತಿಹಾಸದಲ್ಲಿ ಮೂರು ಬಾರಿ ಭಡ್ತಿ ಸಿಕ್ಕಿದ್ದು ನನಗೆ ಮಾತ್ರ ಎಂದು ಹರ್ಷ ವ್ಯಕ್ತಪಡಿಸಿದರು.
ನಮ್ಮಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆಡಿಎಸ್ ಚಿಹ್ನೆ ಹಾಲು ಜೇನಿನಂತೆ ಮಿಶ್ರಣ ಆಗಿದೆ. ಹಾಗಾಗಿ ಚುನಾವಣೆಯ ಅನಂತರ ನಾನು ಯಾವ ಪಕ್ಷಕ್ಕೆ ಸೇರುವೆ ಎನ್ನುವ ಚಿಂತೆ ಶಾಸಕ ರಘುಪತಿ ಭಟ್ಟರಿಗೆ ಬೇಡ. ನಾನು ಶಾಸಕನಾಗಿ ಹೇಗೆ ಕೆಲಸ ಮಾಡಿದ್ದೇನೆ ಎಂಬುದು ನಿಮಗೆ ಗೊತ್ತಿದೆ. ನಾನು ಗೆದ್ದು ಬಂದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕನಾಗಿ ದುಡಿಯುವೆ ಎಂದು ಭರವಸೆ ನೀಡಿದರು.
ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ನನ್ನಲ್ಲಿ ನೀವು ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೆಂದು ಕೇಳಿಕೊಂಡಾಗ ಕಾಂಗ್ರೆಸ್ ಮುಖಂಡರ ಒಪ್ಪಿಗೆ ಪಡೆದು ಸ್ಪರ್ಧಿಸುವ ಭರವಸೆ ನೀಡಿದ್ದೆ. ಒಂದು ವೇಳೆ ನಾನು ಸ್ಪರ್ಧಿಸದೇ, ಜೆಡಿಎಸ್ ಚಿಹ್ನೆ ಹಾಗೂ ಜೆಡಿಎಸ್ ಅಭ್ಯರ್ಥಿಯೇ ಸ್ಪರ್ಧಿಸಿದಲ್ಲಿ ನಮ್ಮ ಕಾರ್ಯಕರ್ತರು ಛಿದ್ರವಾಗುವ ಸಾಧ್ಯತೆ ಇತ್ತು. ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯದಲ್ಲಿ ತೊಂದರೆಯಾಗಬಾರದೆಂದೇ ಪಕ್ಷದ ಉಳಿವಿಗಾಗಿ ಸ್ಪರ್ಧಿಸಿದ್ದೇನೆ ಎಂದು ತಿಳಿಸಿದರು.