ಮಂಗಳೂರು, ಮೇ 25(DaijiworldNews/MS): ರಾಜಕೀಯದಲ್ಲಿ ಯಾವಾಗ ಏನಾದರೂ ಆಗಬಹುದು, ಲೆಕ್ಕಚಾರಗಳು ತಲೆಕೆಳಗಾಗಿ ಹೊಸ ಬದಲಾವಣೆಗಳಾಗಬಹುದು ಎಂಬುವುದಕ್ಕೆ ಸದ್ಯ ಕರಾವಳಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಸಾಕ್ಷಿ.
ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಐದನೇ ಬಾರಿಗೆ ಶಾಸಕರಾಗಿರುವ ಯು.ಟಿ.ಖಾದರ್ ಅವರನ್ನು ಇದೀಗ ಸ್ಪೀಕರ್ ಮಾಡಲಾಗಿದೆ. ಇದರ ಹಲವು ರಾಜಕೀಯದ ತಂತ್ರಗಾರಿಕೆ ಇದ್ದು, ಒಂದೇ ಕಲ್ಲಿನಲ್ಲಿಎರಡು ಹಕ್ಕಿ ಎಂಬ ದಾಳ ಖರ್ಗೆ ಪಾಳಯ ಉರುಳಿಸಿದೆ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳು ಖರ್ಗೆ ಕುಟುಂಬದ ಕಾಸಾ ಮಂಜುನಾಥ್ ಭಂಡಾರಿಗೆ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಹಾದಿ ಸುಗಮಗೊಳಿಸುವುದು ಆಗಿದೆ ಎಂಬ ಅಂಬೋಣವಿದೆ.
ಇದೀಗ ಖರ್ಗೆ ಗುಂಪಿನ ಲೆಕ್ಕಾಚಾರವನ್ನು ಸಿದ್ದರಾಮಯ್ಯ ಸೈನ್ಯದ ರಹಸ್ಯ ಕಾರ್ಯತಂತ್ರವು ಬುಡಮೇಲು ಮಾಡಲಿದೆಯೇ ಎಂಬ ಅನುಮಾನ ಕೂಡಾ ಕಾಂಗ್ರೆಸ್ಸಿಗರನ್ನು ಕಾಡತೊಡಗಿದೆ. ಯಾಕೆಂದರೆ ಖರ್ಗೆಯವರಿಗೆ ಹಿರಿತನದಲ್ಲೂ ಸಮಾನರಾಗಿರುವ ನಾಯಕರೆನಿಸಿರುವ ಬಿ.ರಮಾನಾಥ ರೈ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಸಂಪುಟ ಸೇರಿಸುವ ಚಿಂತನೆ ನಡೆದಿದೆ. ಈ ಪ್ರಯತ್ನವೂ ಕರಾವಳಿಯಲ್ಲಿ ಬಿಜೆಪಿಯನ್ನು ಕಟ್ಟಿಹಾಕುವ ಪ್ರಯತ್ನದ ಮತ್ತೊಂದು ಭಾಗವೇ ಆಗಿದೆ. ಬಂಟ ಸಮುದಾಯವನ್ನು ಕಾಂಗ್ರೆಸ್ ಪಕ್ಚದತ್ತ ಸೆಳೆಯುವ ಉದ್ದೇಶದಿಂದ ಅದೇ ಸಮುದಾಯದ ಮುಖಂಡರಾದ ರಮಾನಾಥ ರೈ ಅವರ ಪ್ರಾಬಲ್ಯವನ್ನು ಹೆಚ್ಚಿಸುವ ಪ್ರಯತ್ನವಿದು.
ರಮಾನಾಥ್ ರೈ ಅವರನ್ನು ಎಂಎಲ್ಸಿ ಮಾಡಿ ನಂತರ ಸಚಿವರನ್ನಾಗಿ ಮಾಡಲು ಕಾಂಗ್ರೆಸ್ ಪಕ್ಷ ಚಿಂತನೆ ನಡೆಸಿದೆ. ಬಿಜೆಪಿಗೆ ಮುಜುಗರ ಉಂಟು ಮಾಡಲು ಖಾದರ್ ಅವರನ್ನು ಸ್ಪೀಕರ್ ಮಾಡಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ರೈ ಅವರನ್ನು ಆಯ್ಕೆ ಮಾಡುವ ತಂತ್ರಗಾರಿಕೆಗೆ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸುರ್ಜೇವಾಲಾ ಅವರೂ ಸೈ ಎಂದಿದ್ದಾರೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಬಂಟ್ವಾಳ ಕ್ಷೇತ್ರದಲ್ಲಿ ಸೋತಿರುವ ರಮಾನಾಥ ರೈ ಅವರು ಚುನಾವಣಾ ರಾಜಕಾರಣಕ್ಕೆ ಗುಡ್ ಬೈ ಹೇಳಿದ್ದರು ಸಕ್ರಿಯ ರಾಜಕೀಯದಲ್ಲಿರುವ ಬಗ್ಗೆ ಸ್ಪಷ್ಟನೆ ನೀಡಿದ್ರು. ಹಾಗಾಗಿ ರಮಾನಾಥ ರೈ ಅವರಿಗೆ ಪರಿಷತ್ ಸದಸ್ಯತ್ವ ಒದಗಿ ಬಂದು ಸಚಿವ ಸ್ಥಾನವೂ ಸಿಕ್ಕಿದಲ್ಲಿ ಕರಾವಳಿಯ ಬಂಟರ ಪಾಳಯದಲ್ಲಿ ಸಂಚಲನ ಸೃಷ್ಟಿಸಿಯಾಗುವುದಂತೂ ಖಚಿತ.