ಬಂಟ್ವಾಳ, ಮೇ 25 (DaijiworldNews/MS): ಬಂಟ್ವಾಳ ಪುರಸಭಾ ವ್ಯಾಪ್ತಿಯ ನೀರಿನ ಶುಲ್ಕ, ತೆರಿಗೆ ಮೊದಲಾದ ಶುಲ್ಕ ಪಾವತಿಗೆ ಕಚೇರಿಯಲ್ಲೇ ಎಚ್ ಡಿ ಎಫ್ ಸಿ ಬ್ಯಾಂಕಿನ ಕೌಂಟರ್ ಕಾರ್ಯಾಚರಿಸುತ್ತಿದ್ದು, ಈ ಕೌಂಟರ್ನಲ್ಲಿ ಪುರಸಭಾವಾಸಿಗಳಿಂದ 2 ಸಾವಿರ ರೂ.ಗಳ ನೋಟು ನಿರಾಕರಿಸಲಾಗಿದ್ದು, ಬೂಡಾ ಮಾಜಿ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ ಅವರು ಆಕ್ರೋಶ ವ್ಯಕ್ತಪಡಿಸಿ ಮ್ಯಾನೇಜರ್ ಅವರನ್ನು ತರಾಟೆಗೆ ತೆಗೆದುಕೊಂಡ ಬಳಿಕ ನೋಟು ಸ್ವೀಕರಿಸಿದ ಘಟನೆ ನಡೆದಿದೆ.
ಮೇ 24ರಂದು ಬೆಳಗ್ಗಿನಿಂದಲೇ 2 ಸಾವಿರ ರೂ. ಹಿಡಿದುಕೊಂಡು ಬಂದ ಸಾಕಷ್ಟು ಮಂದಿಯ ನೋಟು ಸ್ವೀಕರಿಸದೆ ಹಿಂದಕ್ಕೆ ಕಳುಹಿಸಲಾಗಿತ್ತು. ಆದರೆ ದೇವದಾಸ್ ಶೆಟ್ಟಿ ಅವರು ತಮ್ಮ ತೆರಿಗೆ ಪಾವತಿಗೆ ಬಂದಾಗ ನೋಟು ನಿರಾಕರಿಸುತ್ತಿರಿಸುತ್ತಿರುವುದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬ್ಯಾಂಕಿನ ಮ್ಯಾನೇಜರ್ ಅವರನ್ನು ಕರೆಸಲಾಯಿತು.
ಅವರು ಸ್ಥಳಕ್ಕೆ ಆಗಮಿಸಿ ಮೇಲಾಧಿಕಾರಿಗಳನ್ನು ಸಂಪರ್ಕಿಸಿದಾಗ ನೋಟು ಸ್ವೀಕರಿಸುವಂತೆ ತಿಳಿಸಿದರು. ಜತೆಗೆ ಮ್ಯಾನೇಜರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಮುಂದೆ ಎಲ್ಲಾ ಸಾರ್ವಜನಿಕರ ೨ ಸಾವಿರ ರೂ.ಗಳ ನೋಟನ್ನು ಸ್ವೀಕರಿಸಲಾಯಿತು. ಈ ವೇಳೆ ದೇವದಾಸ್ ಶೆಟ್ಟಿ ಅವರು ಪತ್ರಕರ್ತರ ಜತೆ ಮಾತನಾಡಿ, ಆರ್ಬಿಐ ನಿಯಮಗಳನ್ನು ಗಾಳಿಗೆ ತೂರಿ ಎಚ್ಡಿಎಫ್ಸಿ ಬ್ಯಾಂಕಿನವರು ನೋಟು ನಿರಾಕರಣೆ ಮಾಡಿದ್ದಾರೆ. ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಸ್ವೀಕರಿಸಿದ್ದು, ನಿರಾಕರಿಸಿದ ಪರಿಣಾಮ ಸಾಕಷ್ಟು ಮಂದಿಗೆ ತೊಂದರೆಯಾಗಿದೆ ಎಂದರು.