ಮಂಗಳೂರು, ಮಾ 30(MSP): ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 25 ಶೇಕಡ ಬಡವರು ಮತ್ತು ಮಧ್ಯಮ ವರ್ಗದವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇಂತಹ ಬಡವರ್ಗದ ಜನರಿಗೆ ಸ್ವಂತ ಮನೆ ಕಟ್ಟಲು ನಿವೇಶನ ಮತ್ತು ಸರಕಾರದಿಂದ ಧನ ಸಹಾಯ ಮಾಡಿ ಮನೆ ನಿರ್ಮಾಣ ಮಾಡಲು ಎಸ್ಡಿಪಿಐ ಪಕ್ಷ ಮೊದಲ ಆದ್ಯತೆಯಲ್ಲಿ ಪ್ರಯತ್ನಿಸಲಿದೆ ಎಂದು ಲೋಕಸಭಾ ಅಭ್ಯರ್ಥಿ ಇಲ್ಯಾಸ್ ಮಹಮ್ಮದ್ ತುಂಬೆ ತಿಳಿಸಿದ್ದಾರೆ.
ಅವರು ಮಂಗಳೂರು ಉತ್ತರ ಮತ್ತು ಮೂಡಬಿದಿರೆ ವಿಧಾನ ಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ವಿವಿಧೆಡೆ ಮತದಾರರೊಂದಿಗೆ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದರು. ನಾನು ಬಡ ಕುಟುಂಬದಿಂದ ಬಂದವನು. ಈಗಲೂ ಬಡವನಾಗಿಯೇ ಇದ್ದೆನೆ. ನಿರಂತರ 3 ದಶಕಗಳಿಂದ ಬಡವರು, ಮದ್ಯಮ ಮರ್ಗದವರು ಮತ್ತು ದಮನಿತರ ಪರವಾಗಿ ರಾಷ್ಟ್ರಮಟ್ಟದಲ್ಲಿ ಹೋರಾಡುತ್ತಿದ್ದೇನೆ. ಎಸ್ಡಿಪಿಐ ಪಕ್ಷ ಸತ್ಯ, ನ್ಯಾಯ, ಸೌಹಾರ್ದ, ಬಂದುತ್ವ, ಸಾಮಾಜಿಕ ನ್ಯಾಯ ಮತ್ತು ಸಮಾಜವಾದಿ ಸಿದ್ದಾಂತದ ಹೆಸರಲ್ಲಿ ಕಟ್ಟಲಾಗಿದೆ. ಬಡವ- ಶ್ರೀಮಂತರ ಮಧ್ಯೆ ಅಂತರ ಕಡಿಮೆಯಾಗಬೇಕು. ಪ್ರತಿಯೊಬ್ಬ ಭಾರತೀಯನಿಗೂ ಇಲ್ಲಿಯ ರಾಜಕೀಯ ಅಧಿಕಾರ, ಶಿಕ್ಷಣ, ಉದ್ಯೋಗ, ಮತ್ತು ಸ್ವಾಭಿಮಾನಿ ಬದುಕಿನ ಹಕ್ಕಿಗಾಗಿ ಎಸ್ಡಿಪಿಐ ಪಕ್ಷ ಹೋರಾಡುತ್ತಿದೆ ಎಂದರು. ಈ ಬಾರಿ ಜಿಲ್ಲೆಯಲ್ಲಿ ಎಸ್ಡಿಪಿಐ ಪಕ್ಷ ಗ್ಯಾಸ್ ಸಿಲಿಂಡರ್ ಚಿಹ್ನೆಯಡಿಯಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದೆ ಎಂದರು.
ಚುನಾವಣಾ ಪ್ರಚಾರದಲ್ಲಿ ಅಭ್ಯರ್ಥಿಯೊಂದಿಗೆ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ, ರಾಜ್ಯ ಕಾರ್ಯದರ್ಶಿಯಾದ ಅಕ್ರಮ್ ಹಸನ್, ಕಾರ್ಮಿಕ ಮುಖಂಡರಾದ ಜಲೀಲ್ ಕೃಷ್ಣಾಪುರ, ಜಿಲ್ಲಾ ನಾಯಕರಾದ ಅಬೂಬಕ್ಕರ್ ಕುಲಾಯಿ, ಎಸ್ಡಿಪಿಐ ಕಾರ್ಪೋರೇಟರ್ ಅಝೀಝ್, ಜಿಲ್ಲೆ ಮತ್ತು ಅಸೆಂಬ್ಲಿ ಕಾರ್ಯಕರ್ತರು, ಪಕ್ಷದ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.