ಬಂಟ್ವಾಳ, ಮೇ 24 (DaijiworldNews/SM): ಕಾಂಗ್ರೇಸ್ ಕಾರ್ಯಕರ್ತರಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಜರಂಗದಳ ಕಾರ್ಯಕರ್ತ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಮಧ್ಯಾಹ್ನದ ವೇಳೆ ಮಾಣಿ ಎಂಬಲ್ಲಿ ಓಮ್ನಿ ಕಾರಿನಲ್ಲಿ ಬಂದ ಕಾಂಗ್ರೆಸ್ ಕಾರ್ಯಕರ್ತರು ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ಭಜರಂಗದಳ ಕಾರ್ಯಕರ್ತ ಮಹೇಂದ್ರ ಎಂಬವನಿಗೆ ಡಿಕ್ಕಿ ಹೊಡೆದು ಬಳಿಕ ಕಟ್ಟಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ಗಂಭೀರವಾಗಿ ಹಲ್ಲೆಗೊಳಗಾದ ಮಹೇಂದ್ರ ಆತನ ಸ್ನೇಹಿತ ಪ್ರಶಾಂತ್ ನಾಯ್ಕ್ ಅವರನ್ನು ಕೂಡಲೇ ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾರ್ಯಕರ್ತರ ಜೊತೆ ನಾವಿದ್ದೇವೆ. ವಿಧಾನ ಸಭಾ ಅಧಿವೇಶನದಲ್ಲಿ ಭಾಗಿಯಾಗಿದ್ದ ಶಾಸಕರಿಗೆ ಈ ವಿಚಾರ ತಿಳಿದ ಕೂಡಲೇ ಮಂಗಳೂರು ಪೋಲೀಸ್ ವರಿಷ್ಢಾಧಿಕಾರಿಯನ್ನು ಪೋನ್ ಮುಖಾಂತರ ಸಂಪರ್ಕ ಮಾಡಿ ಆರೋಪಿಗಳನ್ನು ತಕ್ಷಣ ಬಂಧಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಅವರು ತಿಳಿಸಿದ್ದಾರೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಲ್ಲಿ ಶಾಂತಿ ಕದಡುವ ವ್ಯಕ್ತಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ ಅವರು, ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಉದ್ದೇಶ ಪೂರ್ವಕವಾಗಿ ಹಲ್ಲೆ ನಡೆಸಿ ಶಾಂತಿಭಂಗ ಉಂಟುಮಾಡಿದರೆ ಅವರ ಮೇಲೆ ಕಾನೂನು ಕ್ರಮ ಜರಗಿಸಲಾಗುವುದು ಎಂದು ಅವರು ತಿಳಿಸಿದರು. ಹಿಂದೂ ಕಾರ್ಯಕರ್ತರ ಮೇಲಿನ ದೌರ್ಜನ್ಯವನ್ನು ಖಂಡಿಸಿದ ಅವರು ಯಾವತ್ತೂ ನಿಮ್ಮ ಜೊತೆ ನಾವಿದ್ದೇವೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಬೃಜೇಶ್ ಚೌಟ, ಸುದರ್ಶನ ಬಜ, ಗಣೇಶ್ ರೈ ಮಾಣಿ, ಹರೀಶ್ ಶೆಟ್ಟಿ ಪೆರಾಜೆ, ವಿನೀತ್ ಪೆರಾಜೆ, ಸಂಪತ್ ಸುವರ್ಣ ಕಡೇಶಿವಾಲಯ,ವಿಜಯ ಮಾಣಿ ಮತ್ತಿತರರು ಉಪಸ್ಥಿತರಿದ್ದರು.