ಮಂಗಳೂರು ನ7: ಕರ್ನಾಟಕ ಸರಕಾರ ನವೆಂಬರ್ 10 ರಂದು ರಾಜ್ಯಾದ್ಯಂತ ಟಿಪ್ಪು ಜಯಂತಿಯನ್ನು ಆಚರಿಸಲು ಎಲ್ಲಾ ರೀತಿಯಲ್ಲೂ ತಯಾರಾಗುತ್ತಿರುವಂತೆಯೇ ಟಿಪ್ಪು ಬಗ್ಗೆ ವರ್ಷಗಳ ಹಿಂದೆ ಸರಕಾರದ ಪ್ರಾಯೋಜಕತ್ವದಲ್ಲಿ ಬಿಡುಗಡೆಗೊಂಡ ಪುಸ್ತಕವೊಂದು ಹೊಸ ವಿವಾದಕ್ಕೆ ನಾಂದಿಯಾಗಿದೆ.
ಮಂಗಳೂರು ನಗರ ಪ್ರಾಧಿಕಾರವು ಪ್ರಕಟಿಸಿದ ’ಮಂಗಳೂರು ದರ್ಶನ’ ಎಂಬ ಪುಸ್ತಕದಲ್ಲಿ ಇತಿಹಾಸಕಾರರನ್ನು ಉಲ್ಲೇಖಿಸಿ ’ಟಿಪ್ಪು ಕರಾವಳಿಯ ಕ್ರೈಸ್ತರನ್ನು ಬಂಧಿಸಿ ಬಲವಂತಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದನು" ಎಂದು ಮುದ್ರಿಸಲಾಗಿದೆ. ಪುಸ್ತಕದ ಪುಟ ಸಂಖ್ಯೆ 199 ರಲ್ಲಿ " ಮಂಗಳೂರನ್ನು ಬ್ರಿಟಿಷರಿಂದ ಗೆದ್ದುಕೊಂಡ ಬಳಿಕ ಟಿಪ್ಪು ಶ್ರೀ ರಂಗಪಟ್ಟಣಕ್ಕೆ ಹಿಂತಿರುಗಿದ. ಹೋಗುವ ಮುನ್ನ ಅಲ್ಲಿಯ ಅಸಂಖ್ಯಾತ ಕ್ರಿಶ್ಚಿಯನರನ್ನು ಬಂಧಿಯನ್ನಾಗಿ ಮಾಡಿ,ಸಂಕೋಲೆ ತೊಡಿಸಿ, ಶ್ರೀ ರಂಗಪಟ್ಟಣಕ್ಕೆ ರವಾನಿಸಿದನೆಂದೂ,ಪ್ರಯಾಣದಲ್ಲಿ ಅನೇಕರು ಮರಣಹೊಂದಿದರೆಂದೂ,ಉಳಿದವರು ಶ್ರೀ ರಂಗಪಟ್ಟಣವನ್ನು ತಲುಪಿದ ನಂತರ ಅವರಲ್ಲಿ ಹೆಚ್ಚಿನವರನ್ನು ಇಸ್ಲಾಂ ಧರ್ಮಕ್ಕೆ ಒತ್ತಾಯದ ಮತಾಂತರ ಮಾಡಿ ಅವರಿಗೆ ’ಅಹಮ್ಮದೀಯ’ರೆಂಬ ಹೆಸರನ್ನಿಡಲಾಯಿತೆಂದೂ ,ಅವರಲ್ಲಿದ್ದ ಅನೇಕ ದೃಡಕಾಯರನ್ನು ಟಿಪ್ಪುವಿನ ಸೈನ್ಯಕ್ಕೆ ಸೇರಿಸಲಾಯಿತೆಂದೂ ,ಮುಂದೆ ಟಿಪ್ಪುವಿನ ಪತನದ ನಂತರ ಉಳಿದ ಕೆಲವು ಕ್ರಿಶ್ಚಿಯನ್ನರು ಊರಿಗೆ ಬಂದು ನೆಲೆಸಿದರೆಂದೂ ಹೇಳಲಾಗಿದೆ" ಎಂದೂ ಬರೆಯಾಗಿದೆ.
ಮುಂದುವರೆದು ಪುಟ ಸಂಖ್ಯೆ 200 ರಲ್ಲಿ ಟಿಪ್ಪು ಮಂಗಳೂರು ಆಸುಪಾಸಿನ 27 ಚರ್ಚುಗಳನ್ನು ಧ್ವಂಸಗೊಳಿಸಿದ್ದಾನೆಂದೂ ನಮೂದಿಸಲಾಗಿದೆ.