ಉಳ್ಳಾಲ, ಮೇ 22 (DaijiworldNews/SM): ಇಲ್ಲಿನ ಠಾಣೆಯಲ್ಲಿ ಸ್ಪೆಷಲ್ ಬ್ರಾಂಚ್ ಕಾನ್ಸ್ ಟೇಬಲ್ ಆಗಿದ್ದ ವಾಸುದೇವ ಚೌಹಾಣ್ ಅವರನ್ನು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಅಮಾನತು ಮಾಡಿದ್ದಾರೆ.
ಇತ್ತೀಚೆಗೆ ತಲಪಾಡಿ ಗಡಿಭಾಗದಲ್ಲಿ ಜೂಜಾಟ ನಡೆಸುತ್ತಿದ್ದ ತಂಡವನ್ನು ಎಸಿಪಿ ನೇತೃತ್ವದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಆದರೆ ಈ ಬಗ್ಗೆ ಉಳ್ಳಾಲ ಎಸ್ ಬಿ ಆಗಿದ್ದ ವಾಸುದೇವ್ ಗೆ ಮಾಹಿತಿಗಳಿದ್ದವು. ಅಲ್ಲದೆ, ಆರೋಪಿಗಳ ಜೊತೆ ವಾಸುದೇವ ಶಾಮೀಲಾಗಿದ್ದ ಎನ್ನುವ ಆರೋಪಗಳಿದ್ದವು. ಈ ಬಗ್ಗೆ ಖಚಿತ ಮಾಹಿತಿಗಳನ್ನು ಹೊಂದಿದ್ದ ಎಸಿಪಿ ಧನ್ಯಾ ನಾಯಕ್ ತಲಪಾಡಿ ಗಡಿಭಾಗದ ತಚ್ಚಣಿ ಎಂಬಲ್ಲಿಗೆ ದಾಳಿ ನಡೆಸಿದ್ದರು. ದಾಳಿ ವೇಳೆ, ಪ್ರಮುಖ ಆರೋಪಿಯಾಗಿದ್ದ ತಲಪಾಡಿ ಗ್ರಾಪಂ ಸದಸ್ಯ ಪರಾರಿಯಾಗಿದ್ದ. ಪ್ರಕರಣ ಸಂಬಂಧಿಸಿ ಉಳ್ಳಾಲ ಪೊಲೀಸರು ಬಳಿಕ ಆರೋಪಿಗಳನ್ನು ಬಂಧಿಸಿದ್ದರು.
ಆದರೆ ಈ ವೇಳೆ, ಕಾನ್ಸ್ ಟೇಬಲ್ ವಾಸುದೇವ ಆರೋಪಿಗಳಿಗೆ ಮಾಹಿತಿ ನೀಡಿದ್ದ. ಮತ್ತು ಅವರೊಂದಿಗೆ ಕೃತ್ಯದಲ್ಲಿ ಶಾಮೀಲಾಗಿದ್ದ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಎಸಿಪಿ ನೇರವಾಗಿ ಪೊಲೀಸ್ ಕಮಿಷನರಿಗೆ ವರದಿ ಕೊಟ್ಟಿದ್ದರು. ಇಲಾಖಾ ತನಿಖೆ ಬಾಕಿಯಿರಿಸಿ ಪೊಲೀಸ್ ಕಮಿಷನರ್ ವಾಸುದೇವ ಅವರನ್ನು ಅಮಾನತು ಮಾಡಿದ್ದಾರೆ.