ಉಡುಪಿ, ಮೇ 22 (DaijiworldNews/HR): ಅಗಲಿದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಯು ಆರ್ ಸಭಾಪತಿಯವರಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶ್ರದ್ದಾಂಜಲಿ ಕಾರ್ಯಕ್ರಮವು ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜರಗಿತು.
ಈ ಸಂಧರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, "ಕಳೆದ ಬಾರಿಯ ರಾಜೀವ್ ಗಾಂಧಿ ಪುಣ್ಯತಿಥಿಯಂದು ಸಭಾಪತಿ ಅವರು ಇದೇ ವೇಧಿಕೆಯಲ್ಲಿ ಕೊನೆಯ ಬಾರಿಗೆ ಭಾಷಣ ಮಾಡಿದ್ದರು. ನನ್ನ ರಾಜಕೀಯ ಜೀವನಕ್ಕೆ ನಾಂದಿ ಹಾಡಿದವರು ಯು ಆರ್ ಸಭಾಪತಿ ಅವರು. ಪಕ್ಷದಲ್ಲಿ ವಿವಿಧ ಹಂತಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು. 1982 ರಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಪರಿಷತ್ತಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಯು ಆರ್ ಸಭಾಪತಿ ಅವರಂತಹ ಓರ್ವ ಉತ್ತಮ ಸಂಸದೀಯ ಪಟು. ಅವರ ಶಾಸಕತ್ವದ ಅವಧಿಯಲ್ಲಿ ಅಂಡಮಾನ ನಿಕೋಬಾರ್ ಮತ್ತು ಗುಜರಾತ್ ನಲ್ಲಿ ನಡೆದ ಭೂಕಂಪ, ಸುನಾಮಿ ಸಂಧರ್ಭದಲ್ಲಿ ಅಲ್ಲಿಗೆ ತೆರಳಿ ಪರಿಹಾರ ಕಾರ್ಯದ ನೇತೃತ್ಬವನ್ನು ಕೂಡಾ ವಹಿಸಿಕೊಂಡಿದ್ದರು. ಯು ಆರ್ ಸಭಾಪತಿ ಹುಟ್ಟು ಕಾಂಗ್ರೆಸಿಗ, ಮರಣದ ಸಂಧರ್ಭದಲ್ಲಿಯೂ ಅವರು ಕಾಂಗ್ರೆಸಿಗನಾಗಿಯೇ ನಿಧನ ಹೊಂದಿದ್ದಾರೆ" ಎಂದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, "ಯು ಆರ್ ಸಭಾಪತಿ ಯವರು ತಾವು ಅಚಲವಾಗಿ ನಂಬಿದ ಕಾರ್ಯವನ್ನು ಗುರಿ ಮುಟ್ಟಿಸಿಯೇ ಬಿಡುತಿದ್ದರು. ಅವರೊಬ್ಬ ಉತ್ತಮ ಮಾನವತಾವಾದಿ. ಶಾಸಕರಾಗಿ ಉಡುಪಿಯ ಕುರಿತಾದ ಸ್ವಷ್ಟ ನೀಲನಕಾಶೆಯನ್ನು ಅವರು ಹೊಂದಿದ್ದರು. ವಾರಾಹಿ ನೀರನ್ನು ಉಡುಪಿಗೆ ತರುವಲ್ಲಿ ಡಾಕ್ಟರ್ ವಿ ಎಸ್ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಸಭಾಪತಿ ಯವರು ಕಾರ್ಯ ಮಾಡಿದ್ದು ಇನ್ನೂ ನೆನಪಿದೆ. ಅಸೆಂಬ್ಲಿಯಲ್ಲಿ ಸಭಾಪತಿಯವರು ಗಂಟೆಗಟ್ಟಲೆ ಮಾತನಾಡಿ ಸರಕಾರವನ್ನು ಪ್ರಶ್ನಿಸುವ ತಾಕತ್ತು ಅವರಲ್ಲಿತ್ತು. ಅವರ ಶಾಸಕತ್ವದ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಸುಂಆರು 18 ಸಾವಿರ ರೋಗಿಗಳಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದ ಕಾರ್ಯಕ್ರಮ ಆ ಕಾಲದಲ್ಲಿ ರಾಜ್ಯದಲ್ಲಿಯೇ ವಿಶಿಷ್ಟವಾಗಿತ್ತು. ಉಡುಪಿ ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಳ್ಳಲು ಪ್ರತಿಪಾದಿಸಿದವರಲ್ಲಿ ಯು ಆರ್ ಸಭಾಪತಿ ಕೂಡಾ ಒಬ್ಬರು. ಒಟ್ಟಿನಲ್ಲಿ ಯು ಆರ್ ಸಭಾಪತಿ ದಿಟ್ಟ ಹೋರಾಟಗಾರ, ನಿಷ್ಟುರವಾದಿ ಮತ್ತು ಮಾನವೀಯ ರಾಜಕಾರಣಿ" ಎಂದವರು ತಿಳಿಸಿದರು.
ಸೂರ್ಯಪ್ರಕಾಶ್, ನಿರ್ದೇಶಕರು ಹರ್ಷ ರಿಟೇಲ್ ಪ್ರೈವೇಟ್ ಲಿಮಿಟೆಡ್ ಮಾತನಾಡಿ, "ಯು ಆರ್ ಸಭಾಪತಿ ಓರ್ವ ಅತ್ಯುತ್ತಮ ಸಂಘಟಕ. ಆದರೆ ರಾಜಕೀಯದಲ್ಲಿ ಅವರು ನತದೃಷ್ಟ. ಉಡುಪಿಯ ಮಟ್ಟಿಗೆ ಯಾರಿಗೂ ಕಡಿಮೆ ಇಲ್ಲದ ವ್ಯಕ್ತಿತ್ವ ಅವರದ್ದು. ಯು ಆರ್ ಸಭಾಪತಿಯವರು ಕರೆ ನೀಡಿದ ಯಾವುದೇ ಕಾರ್ಯಕ್ರಮಕ್ಕೂ ಕೂಡಾ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತಿತ್ತು. ಅಂತಹ ಪ್ರತಿಕ್ರಿಯೆ ಪ್ರಾಯಃ ಈಗಿನ ಯಾವ ನಾಯಕರಿಗೂ ಸಿಗಲು ಸಾಧ್ಯವಿಲ್ಲ ಎಂಬುವುದು ನನ್ನ ಭಾವನೆ. ನನ್ನ ಪ್ರಕಾರ ಯು ಆರ್ ಸಭಾಪತಿಯವರ ನಾಯಕತ್ವದ ಸಂಪೂರ್ಣ ಪ್ರಯೋಜನವನ್ನು ಉಡುಪಿ ಜನರಾದ ನಾವು ಪಡೆದುಕೊಳ್ಳದಿರುವುದು ದುರಾದೃಷ್ಟ. ಉಡುಪಿಯವರ ಒಳಿತಿಗಾಗಿ ಹೋರಾಡಿದ ವ್ಯಕ್ತಿ ಅವರಾಗಿದ್ದರು, ಆದರೂ ಕೂಡಾ ಅವರಿಗೆ ಸಿಗಬೇಕಾಗಿದ್ದ ಸೂಕ್ತ ಸ್ಥಾನಮಾನಗಳು ಅವರಿಗೆ ಲಭಿಸಲಿಲ್ಲ" ಎಂದರು.
ಇದೇ ಸಂಧರ್ಭದಲ್ಲಿ ಫಾದರ್ ವಿಲಿಯಂ ಮಾರ್ಟಿಸ್, ಗಣನಾಥ್ ಎಕ್ಕಾರು, ಪ್ರಸಾದ್ ರಾಜ್ ಕಾಂಚನ್ ಮತ್ತು ದಿವಾಕರ್ ಕುಂದರ್ ನುಡಿ ನಮವನ್ನು ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್ ವತಿಯಿಂದ ಯು ಆರ್ ಸಭಾಪತಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಯನ್ನು ಕೂಡಾ ಮಾಡಲಾಯಿತು.
ಇನ್ನು ಇದೇ ಸಂಧರ್ಭದಲ್ಲಿ ಅಗಲಿದ ಕಾಂಗ್ರೆಸ್ ಮುಖಂಡರಾದ ಸರ್ವೋತ್ತಮ ಪೈ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿನೋದ್ ರಾವ್ ಮತ್ತು ಲೋಕಯ್ಯ ಪಣಿಯಾಡಿ ಅವರಿಗೂ ಶೃದ್ದಾಂಜಲಿಯನ್ನು ಸಮರ್ಪಿಸಲಾಯಿತು.
ಸಭೆಯಲ್ಲಿ ಕಿಶನ್ ಹೆಗ್ಡೆ ಕೊಳ್ಕೆಬೈಲ್, ದಿನೇಶ್ ಪುತ್ರನ್, ಬಿ. ನರಸಿಂಹಮೂರ್ತಿ ಭಾಸ್ಕರ ರಾವ್ ಕಿದಿಯೂರು, ಕುಶಲ ಶೆಟ್ಟಿ, ಅಣ್ಣಯ್ಯ ಸೇರಿಗಾರ್, ವೆರೋನಿಕಾ ಕರ್ನೆಲಿಯೋ, ಹರೀಶ್ ಕಿಣಿ, ರಮೇಶ್ ಕಾಂಚನ್, ದಿನಕರ್ ಹೇರೂರು ಮತ್ತು ಇತರ ನಾಯಕರು ಉಪಸ್ಥಿತರಿದ್ದರು.