ಬಂಟ್ವಾಳ, ಮೇ 22 (DaijiworldNews/MS): ಬಿರು ಬಿಸಿಲಿನಿಂದ ನೇತ್ರಾವತಿ ನದಿಯಲ್ಲಿ ಈ ಬಾರಿ ನೀರಿನ ಮಟ್ಟ ಗಣನೀಯ ಇಳಿದಿದ್ದು, ಬಹಳ ಅಪರೂಪವೆಂಬಂತೆ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನದಿಯ ಮಧ್ಯೆ ಕಲ್ಲುಗಳ ಮೇಲೆ ಇರುವ ಸೀತಾದೇವಿಯ ಪಾದ ಎಂದು ಧಾರ್ಮಿಕ ನಂಬಿಕೆಯುಳ್ಳ ರಚನೆಗಳು ಗೋಚರಿಸತೊಡಗಿದೆ.
ನದಿಯಲ್ಲಿ ಇಂತಹ ಅನೇಕ ಕೌತುಕಗಳಿವೆಯಾದರೂ ಇತ್ತೀಚಿನ ವರ್ಷಗಳಲ್ಲಿ ಆಣೆಕಟ್ಟುಗಳ ನಿರ್ಮಾಣದಿಂದಾಗಿ ಅವುಗಳು ನೀರಿನೊಳಗಿರುತ್ತಿದ್ದವು.
ಈ ಬಾರಿ ನದಿ ನೀರು ಸಂಪೂರ್ಣ ಬತ್ತಿರುವ ಕಾರಣ ನದಿಯಲ್ಲಿರುವ ವಿಶೇಷಗಳು ಕಾಣಿಸಲಾರಂಭಿಸಿವೆ. ಶಿವಲಿಂಗ, ಹೂವು, ಜಡೆ, ಬಟ್ಟಲು, ನಂದಿ, ಪಾದಗಳು ಹೀಗೆ ಹತ್ತಾರು ರಚನೆಗಳು ಇಲ್ಲಿನ ಕಲ್ಲಿನಲ್ಲಿ ಕೆತ್ತಲ್ಪಟ್ಟಿವೆ. ಸ್ಥಳೀಯರು ಪಾದಗಳ ರಚನೆಯು ಸೀತಾ ದೇವಿಯದ್ದೇ ಪಾದ ಎಂದೇ ಪೂಜನೀಯ ಭಾವ ಹೊಂದಿದ್ದಾರೆ. ಕೆಲವೊಂದು ಧಾರ್ಮಿಕ ನಂಬಿಕೆಯ ಗುಂಡಿಗಳು, ಕಯಗಳು ಕೂಡ ಈ ಬಾರಿ ಕಾಣಸಿಕ್ಕಿವೆ. ಕಲ್ಲುಬಂಡೆ ವಿವಿಧ ವಿನ್ಯಾಸಗಳು ಕೂಡ ಆಕರ್ಷಣೀಯವಾಗಿ ಕಂಡುಬರುತ್ತಿವೆ.