ಪುತ್ತೂರು, ಮೇ 22 (DaijiworldNews/MS): ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿರೋಚಿತ ಸೋಲು ಕಂಡಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭಾನುವಾರ ಸಂಜೆ ಕೃತಜ್ಞತಾ ಸಭೆ ನಡೆಸುವ ಮೂಲಕ ಮತ್ತೊಮ್ಮೆ ಶಕ್ತಿ ಪ್ರದರ್ಶನ ಮಾಡಿದ್ದಾರೆ.
<
ಭಾನುವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದರ್ಬೆ ವೃತ್ತದಿಂದ ಮಹಾಲಿಂಗೇಶ್ವರನಿಗೆ ಪ್ರಾರ್ಥನೆ ಮಾಡಿ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಆರಂಭಗೊಂಡಿತು. ಕಾರ್ಯಕರ್ತರು ಕೇಸರಿ ಶಾಲು ಧರಿಸಿ ನಾಲ್ಕು ಸಾಲುಗಳಲ್ಲಿ ಶಿಸ್ತುಬದ್ಧವಾಗಿ ಮಹಾಲಿಂಗೇಶ್ವರ ದೇವಾಲಯದ ಕಡೆಗೆ ಸಾಗಿದರು.
ಮೊದಲೇ ಸೂಚಿಸಿದಂತೆ ರಾಜಕೀಯ ಘೋಷಣೆಗಳಿಲ್ಲದೇ ಶ್ರೀ ಮಹಾಲಿ೦ಗೇಶ್ವರನ ಘೋಷಣೆಗಳನ್ನು, ಭಜನೆಗಳನ್ನು ಮಾತ್ರ ಕಾರ್ಯಕರ್ತರು ಹಾಡಿದರು. ಅರುಣ್ ಕುಮಾರ್ ಪುತ್ತಿಲ ಸಹಿತ ನೂರಾರು ಮಂದಿ ಬರಿಗಾಲಿನಲ್ಲಿ ಸುಮಾರು 2 ಕಿ.ಮೀ. ಸಾಗಿದ್ದು ವಿಶೇಷವಾಗಿತ್ತು.
ಜಾಥಾ ಬಳಿಕ ನಂತರ ನಡೆದ ಸೇವಾ ಸಮರ್ಪಣಾ ಸಮಾರಂಭದಲ್ಲಿ ಪುತ್ತಿಲ ಪರಿವಾರದ ಲೋಗೋ ಅನಾವರಣ ಮಾಡಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದಂತೆ ಈ ಹೊಸ ಸಂಘಟನೆ ಕಾರ್ಯ ನಿರ್ವಹಿಸಲಿದ್ದು, ಆರ್.ಎಸ್.ಎಸ್ ನ ಗುರು ಗೋವಳ್ಕರ್ ಆಶಯದಂತೆ ಪುತ್ತಿಲ ಪರಿವಾರ ಸಂಘ ಕಾರ್ಯ ನಿರ್ವಹಿಸಲಿದೆ ಎಂದು ಸಭೆಯಲ್ಲಿ ಪರಿವಾರದ ಮುಖಂಡ ಶ್ರೀಕೃಷ್ಣ ಉಪಾಧ್ಯಾಯ ಮಾಹಿತಿ ನೀಡಿದ್ದಾರೆ.
ಒಟ್ಟಾರೆ ಲೋಕಸಭಾ ಚುನಾವಣೆಯ ಗುರಿ ಇಟ್ಟುಕೊಂಡು ಪುತ್ತಿಲ ಪರಿವಾರ ಅಸ್ತಿತ್ವಕ್ಕೆ ಬಂದಿದ್ದು, ಕರಾವಳಿಯಲ್ಲಿ ಬಿಜೆಪಿ ಮತ್ತೊಮ್ಮೆ ಹೊಸ ಸವಾಲಾಗುವ ಸಾಧ್ಯತೆ ಇದೆ