ಬಂಟ್ವಾಳ, ಮೇ 21 (DaijiworldNews/SM): ಮದುವೆ ಕಾರ್ಯಕ್ರಮವೊಂದರಲ್ಲಿ ಪುತ್ತೂರು ಕ್ಷೇತ್ರದ ಪರಾಜಿತ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮತ್ತು ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಪರಸ್ಪರ ಮುಖಾಮುಖಿಯಾದ ಪ್ರಸಂಗ ನಡೆದಿದೆ.
ಪೆರಾಜೆಯ ಮಾಣಿ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಅರುಣ್ ಕುಮಾರ್ ಪುತ್ತಿಲ ಮತ್ತು ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಮುಖಾಮುಖಿಯಾಗಿದ್ದಾರೆ. ಈ ವೇಳೆ ಕೈ ಮುಗಿದು ನಮಸ್ಕರಿಸಿದ ಪುತ್ತಿಲ ಪ್ರಭಾಕರ್ ಭಟ್ ಅವರ ಕಾಲಿಗೆರಗಿ ಆಶೀರ್ವಾದ ಪಡೆದು ಕುತೂಹಲ ಮೂಡಿಸಿದ್ದಾರೆ. ಬೆನ್ನು ತಟ್ಟಿ ಅನುಗ್ರಹಿಸಿದ ಪ್ರಭಾಕರ್ ಭಟ್ ಊಟ ಆಯ್ತ ಎಂದು ಕೇಳುವ ಮೂಲಕ ಕುಶಲ ವಿಚಾರಿಸಿ ಮುಂದೆ ಹೆಜ್ಜೆ ಹಾಕಿದರು.
ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ನಾಗಿ ಸ್ಪರ್ಧಾ ಕಣಕ್ಕೆ ಇಳಿದ ಬಳಿಕ ಆರೆಸ್ಸೆಸ್ ಮುಖಂಡ ಡಾ. ಪ್ರಭಾಕರ ಭಟ್ ಪುತ್ತಿಲ ವಿರುದ್ಧ ಹೇಳಿಕೆಗಳನ್ನು ನೀಡಿದ್ದು, ಭಾರೀ ಸುದ್ದಿಯಾಗಿ ಚರ್ಚೆಗೆ ಗ್ರಾಸವಾಗಿತ್ತು.ಇದೀಗ ಇಂದಿನ ಮುಖಾಮುಖಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.