ಬಂಟ್ವಾಳ, ಮೇ 21 (DaijiworldNews/HR): ಮದುವೆ ವಿಚಾರದಲ್ಲಿ ದ್ವೇಷವಾಗಿ ಇಟ್ಟುಕೊಂಡು ವ್ಯಕ್ತಿಯೋರ್ವನನ್ನು ಕೊಲೆ ಮಾಡಲು ಯತ್ನಿಸಿ, ಬಳಿಕ ಕೈಯನ್ನು ಕಡಿದು ತುಂಡು ಮಾಡಿದ ಘಟನೆ ಬಂಟ್ವಾಳ ಕಸಬಾ ಗ್ರಾಮದ ಕೆಳಗಿನ ಮಂಡಾಡಿ ಎಂಬಲ್ಲಿ ನಡೆದಿದೆ.
ಆರೋಪಿ ಎಂದು ಹೇಳಲಾಗಿರುವ ಸಂತೋಷ್ ಆತನ ಸ್ನೇಹಿತ ಶಿವರಾಜ್ ಕುಲಾಲ್ ಎಂಬಾತನನ್ನು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದಾನೆ.
ಘಟನೆಯ ವಿವರ:
ಶಿವರಾಜ್ ಕುಲಾಲ್ ಮಂಗಳೂರಿನ ಮೆಸ್ಕಾಂ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದು, ಇತ್ತೀಚಿಗೆ ಗುತ್ತಿಗೆ ಅವಧಿ ಮುಗಿದ ಕಾರಣ ಮನೆಯಲ್ಲೇ ಇದ್ದರು. ಆದ್ರೆ ಮೇ. 21 ರಂದು ರಾತ್ರಿ ವೇಳೆ ಈತನ ಮೊಬೈಲ್ ಗೆ ಅನಾಮಧೇಯ ಕರೆ ಬಂದಿದ್ದು, ಕರೆಯನ್ನು ಸ್ವೀಕರಿಸಿ ಯಾರು ಎಂದು ಕೇಳಿದಾಗ ಆ ಕಡೆಯಿಂದ ನಾನು ಸಂತೋಷ ಎಂದು ಹೇಳಿದ್ದು, ಆತನು ಶಿವರಾಜ್ ಕುಲಾಲ್ ಎಂಬಾತನ ಪರಿಚಯದವನಾಗಿದ್ದು, ಏನು ವಿಚಾರ ಎಂದು ಕೇಳಿದಾಗ, ನಿನ್ನಲ್ಲಿ ಮಾತನಾಡಲು ಇದೆ, ಎಂದು ಹೇಳಿದಕ್ಕೆ ಶಿವರಾಜ್ ಕುಲಾಲ್ ಅವರು ನಾನು ಈಗ ಬರಲು ಆಗುವುದಿಲ್ಲ ಬೆಳಿಗ್ಗೆ ಬರುತ್ತೇನೆ ಎಂದು ಹೇಳಿದ್ದಾರೆ.
ಅದಕ್ಕೆ ಆತನು ಇಲ್ಲ ಈಗಲೇ ಬಾ ಎಂದು ಹೇಳಿದ್ದು. ಆಗ ಶಿವರಾಜ್ ಕುಲಾಲ್ ಆಯಿತು ಎಲ್ಲಿಗೆ ಬರಬೇಕೆಂದು ಕೇಳಿದಾಗ, ಬಿ ಕಸಬಾ ಗ್ರಾಮದ ಅರಬ್ಬಿ ಗುಡ್ಡೆಯ ಗಣೇಶ ಸ್ಟೋರ ಅಂಗಡಿ ಬಳಿ ಬಾ ಎಂದು ಹೇಳಿದ್ದಾರೆ. ಅದರಂತೆ ಶಿವರಾಜ್ ಕುಲಾಲ್ ಅಲ್ಲಿಗೆ ಹೋದಾಗ ಅಲ್ಲಿ ಪರಿಚಯದ ಸಂತೋಷ್ , ಅಕ್ಕ ಸಾರಿಕಾಳ ವಿಚಾರವನ್ನು ತೆಗೆದು ಮಾತನಾಡಲು ಪ್ರಾರಂಭಿಸಿದಾಗ, ಶಿವರಾಜ್ ಕುಲಾಲ್ ಐದು ವರ್ಷಗಳ ಹಿಂದಿನ ವಿಚಾರವಲ್ಲ ಎಂದು ಹೇಳಿದ್ದು. ಆಗ ಸಂತೋಷನು ನನ್ನ ಅಕ್ಕಳನ್ನು ಸಾಕಲು ಸಾಧ್ಯವಿದೆಯೇ ಎಂದು ಹೇಳಿ ಕೈಯಲ್ಲಿದ್ದ ಹರಿತ ವಾದ ಸಣ್ಣ ತಲವಾರುನಿಂದ ಶಿವರಾಜ್ ಕುಲಾಲ್ ಕುತ್ತಿಗೆಯ ಎಡಬದಿಗೆ ಬಲವಾಗಿ ಬೀಸಿದ ಪರಿಣಾಮ ಕುತ್ತಿಗೆಯ ಎಡಬದಿಗೆ ತಾಗಿ ಗಾಯವಾಗಿದೆ.
ಪುನಃ ಬಲವಾಗಿ ಕಡಿಯಲು ಬಂದಾಗ ಶಿವರಾಜ್ ಕುಲಾಲ್ ಎಡಕೈಯನ್ನು ಅಡ್ಡವಾಗಿ ಹಿಡಿದಾಗ ಎಡಕೈ ಮಣಿಗಂಟಿಗೆ ಬಿದ್ದು, ಹಸ್ತ ತುಂಡಾಗಿ ನೆಲಕ್ಕೆ ಬಿದ್ದಿದೆ.
ಇದನ್ನು ಕಂಡು ಆರೋಪಿತ ಸಂತೋಷ ಅಲ್ಲಿಂದ ಓಡಿ ಹೋಗಿದ್ದು, ನಂತರ ಕರೆ ಮಾಡಿ ಗೆಳೆಯ ಧರ್ಮೇಶ ಹಾಗೂ ತಮ್ಮನ್ನು ಸ್ಥಳಕ್ಕೆ ಕರೆಯಿಸಿ, ಅವರ ಸಹಾಯದಿಂದ ಚಿಕಿತ್ಸೆ ಬಗ್ಗೆ ಬಂಟ್ವಾಳ ಸರಕಾರಿ ಆಸ್ವತ್ರೆ ದಾಖಲಾಗಿದ್ದಾರೆ.
ಅಲ್ಲಿಂದ ಹೆಚ್ಚಿನ ಚಿಕ್ಸಿತೆಗಾಗಿ ಮಂಗಳೂರಿನ ವೆನಲಾಕ್ ಆಸ್ವತ್ರೆ ತೆರಳಿದ್ದು. ನಂತರ ದೇರಳ ಕಟ್ಟೆ ಯೆನೋಪಾಯ ಆಸ್ವತ್ರೆಗೆ ದಾಖಲಾಗಿದ್ದಾರೆ.
ಶಿವರಾಜ್ ಕುಲಾಲ್ 5 ವರ್ಷಗಳ ಹಿಂದೆ ಆರೋಪಿ ಸಂತೋಷನ ಅಕ್ಕಳನ್ನು ಮದುವೆಯಾಗುವುದಾಗಿ ಹೇಳಿದ್ದ ಆದರೆ ಅದಕ್ಕೆ ಮನೆಯವರು ಒಪ್ಪದಿದ್ದಾಗ ಶಿವರಾಜ್ ಕುಲಾಲ್ ಆ ವಿಚಾರವನ್ನು ಅಲ್ಲಿಗೆ ಬಿಟ್ಟಿದ್ದಾರೆ. ಈ ವಿಚಾರವನ್ನು ದ್ವೇಷವಾಗಿ ಇಟ್ಟುಕೊಂಡು ಶಿವರಾಜ್ ಕುಲಾಲ್ ಮನೆಯಿಂದ ಹೊರಗೆ ಕರೆದು ಕೊಲೆ ಮಾಡುವ ಉದ್ದೇಶದಿಂದ ತಲೆಗೆ ತಲವಾರು ಬೀಸಿ ಹಾಗೂ ಕೈಯ ಹಸ್ತವನ್ನು ಕಡಿದು ತುಂಡು ಮಾಡಿದ್ದಾನೆ. ಸಂತೋಷನ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.