ಮಂಗಳೂರು,ಮೇ21(DaijiworldNews/KH):ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೆ ಒಂದೂವರೆ ಸಾವಿರದಿಂದ ಮೂರುವರೆ ಸಾವಿರ ಹಣ ಗಳಿಸುವ ಪೋಸ್ಟ್ ವೀಕ್ಷಿಸಿದ ವ್ಯಕ್ತಿ ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ದಿನಕ್ಕೆ 1,500 ರೂಪಾಯಿಂದ 3,000 ಸಾವಿರದವರೆಗೆ ಹಣ ಗಳಿಸಬಹುದೆಂಬ ಪೋಸ್ಟ್ ಅನ್ನು ಇನ್ಸ್ಟಾ ಗ್ರಾಂನಲ್ಲಿ ವೀಕ್ಷಿಸಿದ್ದಾರೆ. ಈ ವ್ಯಕ್ತಿಯನ್ನು ಟೆಲಿಗ್ರಾಂ ಗ್ರೂಪ್ಗೆ ಸೇರಿಸಿದ ವಂಚಕರು, ಟಾಸ್ಕ್ ಪೂರ್ಣಗೊಳಿಸುವಂತೆ ಸೂಚಿಸಿ, ಟಾಸ್ಕ್ ಮುಗಿದ ಮೇಲೆ ಅವರ ಖಾತೆಯಿಂದ ₹1.81 ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ . ತನಗೆ ಗೊತ್ತಿಲ್ಲದೆ ಸಂಸ್ಥೆಯೊಂದಕ್ಕೆ ಹಣ ವರ್ಗಾವಣೆಯಾಗಿದೆ ಎಂದು ವಂಚನೆಗೊಳಗಾದ ವ್ಯಕ್ತಿ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೇ 6ರಂದು ಖಾತೆದಾರ ವ್ಯಕ್ತಿಯು ತನ್ನ ಬ್ಯಾಂಕ್ ಸ್ಟೇಟ್ಮೆಂಟ್ ನೋಡಿದಾಗ ₹45,657 ಖಾತೆಯಿಂದ ಕಡಿತಗೊಂಡಿರುವುದು ಗೊತ್ತಾಗಿದೆ. ಏಪ್ರಿಲ್ 8ರಂದು ಈ ಹಣ ವರ್ಗಾವಣೆಯಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.