ಮಂಗಳೂರು,ಮೇ21(DaijiworldNews/KH):ಕೆಂಜಾರು ಬಜ್ಪೆ ಬಳಿ ವಿಮಾನ ದುರಂತ ಸಂಭವಿಸಿ ನಾಳೆಗೆ 13 ವರ್ಷ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಗರದ ಕೂಳೂರು- ತಣ್ಣೀರುಬಾವಿ ಬಳಿಯ ಉದ್ಯಾನವನದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ವಿಮಾನ ಅಪಘಾತದಲ್ಲಿ ಮಡಿದ 158 ಜನರ ನೆನಪಿಗಾಗಿ ನಿರ್ಮಾಣ ಮಾಡಿರುವ ಪಾರ್ಕ್ನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದುರಂತಕ್ಕೆ 13 ವರ್ಷ
ಬಜಪೆಯ ಕೆಂಜಾರಿನಲ್ಲಿ ನಡೆದ ಘೋರ ವಿಮಾನ ದುರಂತಕ್ಕೆ ನಾಳೆಗೆ 13 ವರ್ಷವಾಗುತ್ತಿದೆ. 2010ರ ಮೇ 22ರಂದು ಬೆಳಗ್ಗೆ 6.20ಕ್ಕೆ ದುಬಾೖಯಿಂದ ಬಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ಲ್ಯಾಂಡ್ ಆಗುವ ಹಂತದಲ್ಲಿ ನಿಯಂತ್ರಣ ತಪ್ಪಿ ಕೆಂಜಾರಿನ ಗುಡ್ಡದಿಂದ ಕೆಳ ಜಾರಿತ್ತು. ಬೆಂಕಿ ಆವರಿಸಿ ಅದರಲ್ಲಿದ್ದ 158 ಮಂದಿ ಮೃತಪಟ್ಟಿದ್ದು,8 ಮಂದಿಯಷ್ಟೇ ಬದುಕುಳಿದಿದ್ದರು.
ಕರಾವಳಿ ಭಾಗದ ಜನ ಹೆಚ್ಚಾಗಿ ದುಬೈನಲ್ಲಿ ಹೆಚ್ಚಾಗಿ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ದುಬೈನಿಂದ ಪ್ರಯಾಣಿಕರನ್ನು ಹೊತ್ತು ಬಂದ ವಿಮಾನ ಇನ್ನೇನು ಕೆಲವೇ ಹೊತ್ತಿನಲ್ಲಿ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಇನ್ನು ಕೆಲವೇ ಕ್ಷಣಗಳಲ್ಲಿ ತಾಯಿನಾಡಿಗೆ ತಲುಪಿದೆವು ಎನ್ನುವ ಸಂಭ್ರಮದಲ್ಲಿದ್ದವರು ಭೀಕರ ದುರಂತದಲ್ಲಿ ಸಾವನ್ನಪ್ಪಿದ್ದರು ಎನ್ನುವುದ್ದನ್ನು ಮಂಗಳೂರಿಗರು ಎಂದಿಗೂ ಮರೆಯದ ಕಹಿ ಘಟನೆಯೊಂದು ನಡೆಯಿತು.
ಮುಲ್ಲ ಆ್ಯಂಡ್ ಮುಲ್ಲ ಸಂಸ್ಥೆ 147 ಕುಟುಂಬಗಳಿಗೆ ಪರಿಹಾರ ಒದಗಿಸಿರುವುದಾಗಿ ಹೇಳಿಕೊಂಡಿತ್ತು. ಇದರಲ್ಲಿ ಗರಿಷ್ಠ ಎಂದರೆ 7.7 ಕೋಟಿ ರೂ. ಪಡೆದವರೂ ಇದ್ದರು. ಆದರೆ ಈ ಪರಿಹಾರವನ್ನು ಮೃತಪಟ್ಟವರ ಆರ್ಥಿಕ ಆದಾಯ, ಅವರ ವಯಸ್ಸು ಇದೆಲ್ಲವನ್ನೂ ಲೆಕ್ಕ ಹಾಕಿ ನೀಡಲಾಗಿತ್ತು.
ಪರಿಹಾರಕ್ಕಾಗಿ ಈಗಲೂ ಹೋರಾಟ
ಪರಿಹಾರದ ಮೊತ್ತದ ಬಗ್ಗೆ ಅನೇಕ ಕುಟುಂಬದವರು ಆಕ್ಷೇಪವೆತ್ತಿದ್ದರು. ವಾಯು ಅಪಘಾತದ ಪರಿಹಾರ ಕುರಿತು ಅಂತಾರಾಷ್ಟ್ರೀಯ ಒಪ್ಪಂದವಾದ “ಮೋಂಟ್ರಿಯಲ್ ಕನ್ವೆನನ್’ ಪ್ರಕಾರ ಆಗಿನ ಲೆಕ್ಕಾಚಾರದಂತೆ 75 ಲಕ್ಷ ರೂ.ನಷ್ಟು ಮೊತ್ತವನ್ನು ಮೊದಲ ಹಂತದಲ್ಲಿ ಎಲ್ಲ ಸಂತ್ರಸ್ತ ಕುಟುಂಬದವರಿಗೂ ನೀಡಬೇಕು ಎಂದು ಕುಟುಂಬದವರು ಕೇರಳದಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದು. ಇದು ಸುಪ್ರೀಂ ಕೋರ್ಟ್ ವರೆಗೂ ತಲಪಿತು. ಇನ್ನೂ ಸುಮಾರು 45 ಕುಟುಂಬದವರು ಕಾನೂನು ಹೋರಾಟದಲ್ಲೇ ಇದ್ದಾರೆ. ಈ ನಡುವೆ ಏರ್ಇಂಡಿಯಾವನ್ನು ಟಾಟಾ ಸಮೂಹ ಖರೀದಿಸಿದ್ದು, ಮಾಲಕತ್ವ ಬದಲಾಗಿರುವುದರಿಂದ ಪರಿಹಾರ ನೀಡಲು ಸಾಧ್ಯವಿಲ್ಲ, ಹಾಗಾಗಿ ಪರಿಹಾರದ ಅರ್ಜಿಗಳನ್ನು ರದ್ದುಪಡಿಸುವಂತೆ ಕೇರಳ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.