ಕುಂದಾಪುರ, ಮೇ 20 (DaijiworldNews/SM): ಕೋಟ್ಯಂತರ ರೂಪಾಯಿ ಖರ್ಚುಮಾಡಿ ಉಜ್ವಲ ಯೋಜನೆ ಮೂಲಕ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ವಿತರಣೆ ಮಾಡಿದ್ದರೂ ಗ್ಯಾಸ್ ಬೆಲೆ ಏರಿಕೆಯಾಗಿದೆ ಎಂಬ ಅಫ್ರಚಾರ ಈ ಬಾರಿಯ ಚುನಾವಣೆಯಲ್ಲಿ ಪ್ರತಿಫಲಿಸಿದೆ. ಆರೋಗ್ಯ ರಕ್ಷಣೆಗೆ ಆಯುಷ್ಮಾನ್ ಭಾರತ ಯೋಜನೆ ಅನುಷ್ಟಾನ ಮಾಡಿದ್ದರೂ ಕಾಂಗ್ರೆಸ್ ನ ಗ್ಯಾರೆಂಟಿಗಳನ್ನು ಮತದಾರರು ನಂಬಿದ್ದರ ಫಲವಾಗಿ ಈ ಬಾರಿ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ರಾಜ್ಯದಲ್ಲಿ ನಮ್ಮ ಸರ್ಕಾರ ಇಲ್ಲ ಎನ್ನುವ ಕಾರಣಕ್ಕೆ ಯಾರೂ ಧೃತಿಗೇಬೇಕಾಗಿಲ್ಲ. ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಶಿವಮೊಗ್ಗೆ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಹೇಳಿದ್ದಾರೆ.
ಅವರು ವಂಡ್ಸೆಯಲ್ಲಿ ಹಮ್ಮಿಕೊಂಡದ್ದ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೆಸ್ ಈ ರಾಜ್ಯಕ್ಕೆ ಅಪಾಯಕಾರಿಯಾದ ಗ್ಯಾರೆಂಟಿ ಗಳನ್ನು ಹಂಚಲು ಹೊರಟಿದೆ. ಹಿಂದುತ್ವದ ಅಸ್ತಿತ್ವವನ್ನು ಪ್ರಶ್ನಿಸುವ ಭಜರಂಗದಳ ನಿಷೇಧವನ್ನು ಪ್ರಣಾಳಿಕೆಯಲ್ಲಿ ಹೇಳಿದೆ. ಆದರೆ ಹಿಂದೂಗಳನ್ನು ಕೆಣಕಲು ಬಂದರೆ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು
ಮುಂಬರುವ ಚುನಾವಣೆಗಳಲ್ಲಿ ನಾವು ಗೆಲುವಿಗೆ ಪಣತೊಡಬೇಕಾಗಿದೆ ಎಂದ ಅವರು ಸ್ಥಳೀಯಾಡಳಿತ ಸೇರಿದಂತೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರತೀ ಮನೆಗೂ ತಿಳಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭ ಶಾಸಕ ಗುರುರಾಜ್ ಗಂಟಿಹೊಳೆ, ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಚುನಾವಣಾ ಉಸ್ತುವಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ, ಜಿಲ್ಲಾ ಕಾರ್ಯದರ್ಶಿ ಮಾಲತಿ ಬಿ ನಾಯಕ್, ವಂಡ್ಸೆ ಶಕ್ತಿ ಕೇಂದ್ರದ ಅಧ್ಯಕ್ಷ ನಾಗರಾಜ ಶೆಟ್ಟಿ ನಾರ್ಕಳಿ, ಮಂಡಲ ಪ್ರಭಾರಿ ಕಿಶೋರ್ ಕುಂದಾಪುರ, ಮಾಜಿ ಜಿ.ಪ. ಸದಸ್ಯರಾದ ಸುರೇಶ್ ಬಟವಾಡಿ, ರೋಹಿತ್ ಶೆಟ್ಟಿ, ಶೋಭಾ ಪುತ್ರನ್, ತಾ.ಪಂ. ಮಾಜೀ ಅಧ್ಯಕ್ಷರುಗಳಾದ ಮಹೇಂದ್ರ ಪೂಜಾರಿ, ಇಂದಿರಾ ಶೆಟ್ಟಿ, ಶ್ಯಾಮಲಾ ಕುಂದರ್ ಮಾಲಿನಿ ಕೆ ಮೊದಲಾದವರು ಉಪಸ್ಥಿತರಿದ್ದರು.