ಕಡಬ, ಮೇ 20 (DaijiworldNews/SM): ತಾಲೂಕಿನ ಇಚ್ಲಂಪಾಡಿಯಲ್ಲಿ ಅನುಮತಿ ಹೆಸರಲ್ಲಿ ಅನಧೀಕೃತವಾಗಿ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ಅನುಮತಿ ಪಡೆದು ಮರಳುಗಾರಿಕೆ ನಡೆಸುತ್ತಿದ್ದೇವೆ ಎಂದು ಮರಳು ಸಂಗ್ರಹಕಾರರು ಮಾಹಿತಿಯನ್ನು ನೀಡುತ್ತಿದ್ದರಾದರೂ ಕೂಡಾ, ಅನುಮತಿ ಪತ್ರ ಒಂದು ಕಡೆಯ ಪ್ರದೇಶದದ್ದಾರೆ ಬೇರೊಂದು ಕಡೆಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ, ಅನುಮತಿ ಒಂದು ಕಡೆ, ಮರಳು ಸಂಗ್ರಹ ಇನ್ನೊಂದು ಕಡೆ ಎಂಬ ಆರೋಪಕ್ಕೆ ಸಾಕ್ಷಿಯೆಂಬಂತೆ ಮಾಹಿತಿ ಹಕ್ಕು ಕಾಯ್ಧೆಯಲ್ಲಿ ವಿಚಾರ ಬಹಿರಂಗಗೊಂಡಿದೆ ಎನ್ನಲಾಗಿದೆ. ಇಚ್ಲಂಪಾಡಿಯ ನದಿ ತೀರದಲಿ ಹಲವು ಬೋಟ್, ತೆಪ್ಪಗಳ ಮೂಲಕ ಯಾವುದೇ ಸುರಕ್ಷತಾ ಕ್ರಮವಿಲ್ಲದೆ ನದಿಯ ಮಧ್ಯಭಾಗದಿಂದಲೇ ಟನ್ ಗಟ್ಟಲೇ ಮರಳು ಸಂಗ್ರಹ ಮಾಡಲಾಗುತ್ತಿದೆ. ಮಾತ್ರವಲ್ಲದೆ ನಂಬರ್ ಪ್ಲೇಟ್, ಇನ್ಸೂರೆನ್ಸ್, ಫಿಟ್ನೆಸ್ ಇಲ್ಲದ ಲಾರಿಗಳಲ್ಲೂ ಮರಳು ಸಾಗಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೂಡಾ ಕೇಳಿ ಬಂದಿದೆ. ಮರಳನ್ನು ಲಾರಿಗಳಲ್ಲಿ ಸಾಗಾಟ ಮಾಡುವಾಗ ಮರಳಿನ ಮೇಲೆ ಟರ್ಪಾಲ್ ಮುಚ್ಚಿ ಸಾಗಾಟ ಮಾಡದೆ ಹಾಗೆಯೇ ಸಾಗಾಟ ಮಾಡಲಾಗುತ್ತಿದ್ದು ದ್ವಿಚಕ್ರ ವಾಹನ ಸವಾರರಿಗೆ ಸಂಚರಿಸಲು ಸಂಕಷ್ಟ ಎದುರಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ನೀತಿ ಸಂಘಟನೆ, ಕೆಆರ್ ಎಸ್ ಪಕ್ಷದ ಕಾರ್ಯಕರ್ತರು, ಕಡಬ ಪೊಲೀಸರ ಜೊತೆಗೂಡಿ ಅಕ್ರಮ ಮರಳುಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಲೋಕಾಯುಕ್ತಕ್ಕೂ ನಾವು ದೂರು ನೀಡಲು ಸಿದ್ಧರಿದ್ದೇವೆ ಎಂದು ನೀತಿ ಮತ್ತು ಕೆಆರ್ ಎಸ್ ಸಂಘಟನೆಯ ಕಾರ್ಯಕರ್ತರು ಎಚ್ಚರಿಕೆಯನ್ನು ನೀಡಿದ್ದಾರೆ.