ಬಂಟ್ವಾಳ, ಮೇ 20 (DaijiworldNews/MS): ಅತ್ತ ಬೆಂಗಳೂರಿನಲ್ಲಿ ಸಿಎಂ ಪ್ರಮಾಣವಚನಕ್ಕೆ ಇಡೀ ಬೆಂಗಳೂರು ಸಜ್ಜುಗೊಳ್ಳುತ್ತಿದ್ದರೆ, ಇತ್ತ ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಶಾಸಕರ ಕಚೇರಿ ಶೃಂಗಾರಗೊಳ್ಳುತ್ತಿದೆ. ಅವರು ಕಳೆದ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಸಕರ ಕಚೇರಿಯಲ್ಲಿಯೇ ಈ ಬಾರಿ ಕೂಡ ಶಾಸಕರ ಕಚೇರಿ ಕಾರ್ಯಚರಿಸಲಿದ್ದು ಜನಸೇವೆ ನೀಡಲು ಸಜ್ಜಾಗುತ್ತಿದೆ.
ಶಾಸಕರ ಕಚೇರಿಯನ್ನು ಶೃಂಗಾರ ಗೊಳಿಸುವ ಸಲುವಾಗಿ ಸುಣ್ಣ ಬಣ್ಣ ಬಳಿಯುವ ಕಾರ್ಯ ಭರದಿಂದ ಸಾಗುತ್ತಿದೆ, ಕಳೆದ ಬಾರಿ ಶಾಸಕರ ಕಚೇರಿ ಪ್ರವೇಶ ದ್ವಾರ ಇಕ್ಕೆಲಗಳ ಗೋಡೆಗಳಲ್ಲಿ ವರ್ಲಿ ಚಿತ್ತಾರಗಳು ಕಂಗೊಳಿಸುತ್ತಿದ್ದು, ಸರಕಾರದ ವಿವಿಧ ಮಾಹಿತಿಗಳನ್ನು ಕೂಡ ನೀಡಲಾಗುತ್ತಿತ್ತು,ಈ ಬಾರಿ ಅದೇ ಸ್ಥಳದಲ್ಲಿ ಬೇರೆ ಚಿತ್ತಾರಗಳನ್ನು ಮೂಡಿಸುವ ಉದ್ದೇಶದಿಂದ ಬೇರೆ ಬಣ್ಣಗಳನ್ನು ಬಳಿಯದಾಗಿದೆ. ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ದೃಷ್ಟಿಯಿಂದ ಸದ್ರಿ ಕಟ್ಟಡ ನಿರ್ಮಾಣಗೊಂಡ ಬಳಿಕ ಇದೇ ಸ್ಥಳದಲ್ಲಿ ಶಾಸಕರ ಕಚೇರಿ ಕಾರ್ಯಾಚರಿಸುತ್ತಿದೆ. ಸೋಮವಾರದಿಂದಲೇ ಶಾಸಕರ ಕಚೇರಿ, ಬಿಸಿ ರೋಡಿನಲ್ಲಿ ಕಾರ್ಯಾಚರಿಸಲಿದ್ದು, ಜನತೆಯನ್ನು ಆಕರ್ಷಿಸುವ ಜೊತೆಗೆ ಉತ್ತಮ ಜನಸೇವೆ ನೀಡಲು ಶಾಸಕರ ಕಚೇರಿ ಸಜ್ಜಾಗುತ್ತಿದೆ.