ಮಂಗಳೂರು, ಮಾ 29(SM): ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪಣಂಬೂರು ಸಮೀಪದ ಮೀನಕಳಿಯ ಸಮುದ್ರ ಕಿನಾರೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ನಿರತರಾಗಿದ್ದ ಇಬ್ಬರು ಬುಕ್ಕಿಗಳನ್ನು ವಶಕ್ಕೆಪಡೆಯುವಲ್ಲಿ ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳ ಮತ್ತು ಪಣಂಬೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಕುಳಾಯಿ ನಿವಾಸಿ ಭರತೇಶ್ ಎಸ್. ಶ್ರೀಯಾನ್(38) ಹಾಗೂ ಕದ್ರಿ ನಿವಾಸಿ ಮಹಂತೇಶ್ ಅಮೀನ್(38) ಪೊಲೀಸ್ ವಶದಲ್ಲಿದ್ದಾರೆ.
ಆರೋಪಿಗಳಿಂದ ಬೆಟ್ಟಿಂಗ್ ಗೆ ಬಳಸಲಾಗುತ್ತಿದ್ದ ಮೊಬೈಲ್ ಫೋನ್ ಗಳು, ನಗದು ಸೇರಿದಂತೆ ಸುಮಾರು 68000 ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಭರತೇಶ್ ಎಸ್. ಶ್ರೀಯಾನ್ ಮತ್ತು ಮಹಂತೇಶ್ ಅಮೀನ್ ಎಂಬವರು Brizze Sport ಮತ್ತು Delight ಎಂಬ Mobile App ನಲ್ಲಿ ಪಾಕಿಸ್ತಾನ ಮತ್ತು ಆಸ್ಟೇಲಿಯಾ ನಡುವೆ ಅಬುದಾಬಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಏಕದಿನ ಕ್ರಿಕೇಟ್ ಪಂದ್ಯಕ್ಕೆ ಸಂಬಂಧಪಟ್ಟು ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಾ ಕ್ರಿಕೇಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿದ್ದರು. ಅಲ್ಲದೆ ಇವರಿಂದ ಹಣ ಸಂಗ್ರಹ ಮಾಡಲು ಬೇರೆ ವ್ಯಕ್ತಿ ಬರುತ್ತಿರುವುದಾಗಿ ಮಂಗಳೂರು ನಗರ ಉತ್ತರ ಉಪವಿಭಾಗ ರೌಡಿ ನಿಗ್ರಹ ದಳದ ಪೊಲೀಸ್ ಉಪ ನಿರೀಕ್ಷಕರಿಗೆ ಮಾಹಿತಿ ಲಭಿಸಿದೆ.
ಇದರಂತೆ ಪಣಂಬೂರು ಪೊಲೀಸ್ ನಿರೀಕ್ಷಕರಿಗೆ ಬರವಣಿಗೆಯಲ್ಲಿ ದೂರು ನೀಡಿ ನ್ಯಾಯಾಯಲದಿಂದ ಅನುಮತಿಯನ್ನು ಪಡದುಕೊಂಡು ಬೆಟ್ಟಿಂಗ್ ನಡೆಸಲಾಗುತ್ತಿದ್ದ ಸ್ಥಳಕ್ಕೆ ಜಂಟಿಯಾಗಿ ದಾಳಿ ನಡೆಸಿ ಕ್ರಿಕೇಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿದ್ದ ಭರತೇಶ್ ಎಸ್. ಶ್ರೀಯಾನ್ ಮತ್ತು ಮಹಂತೇಶ್ ಅಮೀನ್ ಎಂಬವರನ್ನು ವಿಚಾರಿಸಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.