ಉಡುಪಿ, ಮೇ 19 (DaijiworldNews/HR): ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು ನಾಳೆ ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ. ಇದೇ ಸಂಧರ್ಭದಲ್ಲಿ ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ ಹರಕೆಯನ್ನು ಪೂರೈಸಲು ಉರುಳು ಸೇವೆಯನ್ನು ನಡೆಸಿದ್ದಾರೆ.
ಉಡುಪಿ ಕಾಂಗ್ರೆಸ್ ನ ಟಿಕೆಟ್ ಆಕಾಂಕ್ಷಿ ಮತ್ತು ನಾಯಕರಾಗಿರುವ ಕೃಷ್ಣ ಮೂರ್ತಿ ಆಚಾರ್ಯ ಉಡುಪಿಯ ಕನ್ನರ್ಪಾಡಿ ಜಯದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 130 - 136 ಸೀಟ್ ಗೆದ್ದು ಬಹುಮತದೊಂದಿಗೆ ಸರಕಾರ ರಚನೆ ಮಾಡುವಂತಾದರೆ 5 ಶುಕ್ರವಾರ ಉರುಳು ಸೇವೆ ನಡೆಸಿ, 9 ಅಟ್ಟೆ ಮಲ್ಲಿಗೆಯನ್ನು ಜಯದುರ್ಗಾಪರಮೇಶ್ವರಿಗೆ ಸಮರ್ಪಿಸುತ್ತೇನೆ ಎಂದು ಹರಕೆ ಹೊತ್ತಿದ್ದು ಆ ಪ್ರಕಾರ ಶುಕ್ರವಾರ ಮೇ 19 ರಂದು ಉರುಳು ಸೇವೆಗೆ ಚಾಲನೆ ನೀಡಿದ್ದಾರೆ.
ಮೇ 19 ರಿಂದ ಪ್ರಾರಂಭಿಸಿ ಮುಂದಿನ 5 ಶುಕ್ರವಾರದ ವರೆಗೆ ಕೃಷ್ಣ ಮೂರ್ತಿ ಆಚಾರ್ಯ ಉರುಳು ಸೇವೆ ನಡೆಸಿ, ಶ್ರೀ ದೇವಿಗೆ 9 ಅಟ್ಟೆ ಮಲ್ಲಿಗೆಯನ್ನು ಸಮರ್ಪಣೆ ಮಾಡಲಿದ್ದಾರೆ.
ಉರುಳು ಸೇವೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೃಷ್ಣ ಮೂರ್ತಿ ಆಚಾರ್ಯ ಅವರು "ಚುನಾವಣೆ ಸಂಧರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರಕ್ಕೆ 130 ರಿಂದ 136 ಸೀಟ್ ಗೆದ್ದು ಬಹುಮತದ ಸರಕಾರ ರಚಿಸುವ ಅವಕಾಶ ಒದಗಿ ಬಂದಲ್ಲಿ ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ಅಮ್ಮನಿಗೆ ೫ ಶುಕ್ರವಾರದಂದು ಉರುಳು ಸೇವೆ ನಡೆಸಿ 9 ಅಟ್ಟೆ ಮಲ್ಲಿಗೆಯನ್ನು ಸಮರ್ಪಣೆ ಮಾಡುತ್ತೆನೆ ಎಂದು ಹರಕೆ ಹೊತ್ತಿದ್ದೆ. ಅಮ್ಮ ಜಯದುರ್ಗಾಪರಮೇಶ್ವರಿ ಸರ್ವ ಜನರ ಪ್ರಾರ್ಥನೆ ಯನ್ನು ಮನ್ನಿಸುತ್ತಾಣೆ. ನನ್ನ ಪ್ರಾರ್ಥನೆಯನ್ನು ಕೂಡಾ ಮನ್ನಿಸಿ ಈ ಬಾರಿ 136 ಸೀಟ್ ಗೆದ್ದು ಕಾಂಗ್ರೆಸ್ ಪಕ್ಷ ಸರಕಾರ ರಚನೆ ಮಾಡುವಂತೆ ಮಾಡಿದ್ದಾಳೆ. ಈಗ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ ಗ್ಯಾರಂಟಿಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಲು ಸಹಕಾರಿಯಾಗಲಿದೆ. 112-113 ಸೀಟ್ ಬಂದರೂ ಕೂಡಾ ಬಿಜೆಪಿ ಪಕ್ಷ ಅನೈತಿಕವಾಗಿ ಕಳೆದ ಬಾರಿ ಸರಕಾರ ರಚನೆ ಮಾಡಿರುವುದನ್ನು ನೋಡಿದ್ದೇವೆ. ಆದುದರಿಂದ ಈ ಬಾರಿ ಸ್ವಷ್ಟವಾಗಿ 131-136 ಸೀಟ್ ಬರಲು ಪ್ರಾರ್ಥಿಸಿದ್ದು, ಪ್ರಾರ್ಥನೆ ಸಿದ್ದಿಸಿದ್ದು ಈಗ ಹರಕೆಯನ್ನು ಸಂಪೂರ್ಣ ಗೊಳಿಸುತ್ತೆನೆ" ಎಂದರು.
ಈ ಸಂಧರ್ಭದಲ್ಲಿ ಹಲವಾರು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು.