ಉಡುಪಿ, ಮೇ 19 (DaijiworldNews/HR): ಉಡುಪಿಯ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕೃಷ್ಣ ಮಠದದಲ್ಲಿ ಒಂದೆಡೆ ಪ್ರವಾಸಿಗರ ದಂಡು ಹರಿದು ಬರುತ್ತಿದ್ದಲ್ಲಿ ಮತ್ತೊಂದೆಡೆ ಪ್ರವಾಸಿಗರು ದುರ್ವಾಸನೆಯಲ್ಲಿ ನಲುಗುತ್ತಿದ್ದಾರೆ.
ಶ್ರೀಕೃಷ್ಣ ಮಠದ, ಧಾರ್ಮಿಕ ಮತ್ತು ಇತರ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುವ ರಾಜಾಂಗಣ ಸಭಾಭವನದ, ಮೂಡಣ ಪ್ರವೇಶ ದ್ವಾರದ ಸನಿಹ ಕಸ ತ್ಯಾಜ್ಯಗಳನ್ನು ಸಂಗ್ರಹಿಸಿ ಇಡಲಾಗಿದ್ದು, ಪರಿಣಾಮ ಪವಿತ್ರ ತೀರ್ಥ ಕ್ಷೇತ್ರದ ಅಂದಗೆಟ್ಟಿದ್ದಲ್ಲದೆ, ಇಲ್ಲಿ ರೋಗ ವಾಹಕ ಸೊಳ್ಳೆಗಳ ಉತ್ಪತ್ತಿಯಾಗುವ ಲಕ್ಷಣಗಳು ಕಂಡುಬಂದಿವೆ. "ಸುಂದರ ಉಡುಪಿ- ಶ್ರೀಕೃಷ್ಣನ ಉಡುಪಿ" ಎಂದು ಬಣ್ಣನೆಗೆ ಪಾತ್ರವಾಗಿರುವ ಉಡುಪಿಗೆ ಇದೊಂದು ಕಪ್ಪುಚುಕ್ಕೆಯಂತಾಗಿದೆ.
ಇದೀಗ ರಜಾದಿನಗಳಾಗಿರುವ ಹಿನ್ನಲೆಯಲ್ಲಿ ಶ್ರೀ ಕೃಷ್ಣನ ದರ್ಶನಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಿದ್ದು, ಇಲ್ಲಿ ಸಂಗ್ರಹವಾಗಿರುವ ಕಸದ ರಾಶಿಯಿಂದಾಗಿ ಭಕ್ತರು ಕೂಡಾ ಸಂಕಷ್ಟಕ್ಕೀಡಾಗಿದ್ದಾರೆ. ಈ ಕಸದ ರಾಶಿಯಲ್ಲಿರುವ ತ್ಯಾಜ್ಯದಿಂದಾಗಿ ಈಗಾಗಲೇ ಪರಿಸರದಲ್ಲಿ ವಾಸನೆ ಹರಡಿದ್ದು ಮಾತ್ರವಲ್ಲದೇ ಸೊಳ್ಳೆಗಳ ಕಾಟ ಕೂಡಾ ಆರಂಭವಾಗಿದೆ.
ಕೃಷ್ಣನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಈ ಉಚಿತ ಕಸದ ರಾಶಿಯ ಭಾಗ್ಯ ಒಮ್ಮೆಗೆ ನರಕ ದರ್ಶನ ಮಾಡಿಸುವುದಂತೂ ಖಂಡಿತ. ಸ್ವಚ್ಛ ಭಾರತ್ ಎಂದೆಲ್ಲಾ ಅಭಿಯಾನ ನಡೆಸಿರುವ ಉಡುಪಿಯ ಮಂದಿ ತಮ್ಮದೇ ಊರಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರವೊಂದರಲ್ಲಿ ಇರುವ ತಹ ಕಸದ ರಾಶಿಯ ಕುರಿತಾಗಿ ಕಣ್ಣು ಮುಚ್ಚಿ ಕುಳಿತಿರುವುದು ನಿಜಕ್ಕೂ ವಿಪರ್ಯಾಸ.
ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಇಲ್ಲಿನ ಕಸದ ರಾಶಿಯನ್ನು ಅಗತ್ಯವಾಗಿ ವಿಲೇವಾರಿ ಮಾಡಬೇಕಾಗಿದೆ. ಮಾತ್ರವಲ್ಲದೇ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮಠದ ಪರಿಸರದಲ್ಲಿ ಮರುಕಳಿಸದಂತೆ ಸೂಕ್ತ ವ್ಯವಸ್ಥೆಯನ್ನು ನಗರಸಭೆ ಮತ್ತು ಸಂಬಂಧಪಟ್ಟವರು ವಹಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.