ಪುತ್ತೂರು, ಮೇ 19 (DaijiworldNews/HR): ಬ್ಯಾನರ್ ವಿಚಾರದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿರುವ ಹಿನ್ನೆಲೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುತ್ತೂರಿನ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಅರುಣ್ ಪುತ್ತಿಲ ಪರ ಕಾರ್ಯಕರ್ತರು ಹೊರದಬ್ಬಿ ಬಾಗಿಲು ಹಾಕಿರುವ ಘಟನೆ ನಡೆದಿದೆ.
ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ಕೊಠಡಿಯೊಳಗೆ ಕೇವಲ ಬಸನಗೌಡ ಪಾಟೀಲ್ ಅವರನ್ನು ಮಾತ್ರ ಬಿಟ್ಟ ಪುತ್ತಿಲ ಪರ ಬೆಂಬಲಿಗರು ಅವರ ಜೊತೆ ಆಗಮಿಸಿದ್ದ ಬಿಜೆಪಿ ಹಾಗೂ ಬಿಜೆಪಿ ಪರ ಇರುವ ಸಂಘ ಪರಿವಾರದ ಮುಖಂಡರನ್ನು ಬಾಗಿಲಿನಿಂದಲೇ ತಳ್ಳಿ ಹೊರದಬ್ಬಿದ್ದಾರೆ. ಈ ಸಂದರ್ಭ ಎರಡೂ ತಂಡಗಳ ಮಧ್ಯೆ ತಳ್ಳಾಟ- ನೂಕಾಟ ನಡೆದಿದ್ದು, ಇದರ ವೀಡಿಯೋ ವೈರಲ್ ಆಗಿದೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಎದುರಲ್ಲೇ ಬಿಜೆಪಿ ನಾಯಕನಿಗೆ ಆಸ್ಪತ್ರೆಯ ಒಳಗೆ ಹೋಗದಂತೆ ಪುತ್ತಿಲ ಕಾರ್ಯಕರ್ತರು ಹೊರದಬ್ಬಿದ್ದಾರೆ.
ಈ ಘಟನೆಯಿಂದ ವಿಚಲಿತರಾದ ಬಿಜೆಪಿ ಕಾರ್ಯಕರ್ತ ಅಜಿತ್ ರೈ ಹೊಸಮನೆ ಅವರು ಹಿಂದು ಸಂಘಟನೆ ಕಾರ್ಯಕರ್ತರ ನಡೆಗೆ ಆಕ್ರೋಶವನ್ನೂ ಆಸ್ಪತ್ರೆಯಲ್ಲಿ ವ್ಯಕ್ತಪಡಿಸಿದ್ದಾರೆ.