ಪುತ್ತೂರು, ಮೇ 19 (DaijiworldNews/HR): ಸುಳ್ಳು ಮಾಹಿತಿಗಳಿಂದ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ಘಟನೆ ಬಗ್ಗೆಕೆದಕುವುದಕ್ಕಿಂತ ಮತ್ತೆ ಒಂದಾಗಿ ಪಕ್ಷ, ಸಂಘಟನೆ, ದೇಶ ಕಟ್ಟೋಣ ಎಂದು ವಿಜಯಪುರ ನಗರ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ಹಲ್ಲೆಗೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಆರೋಗ್ಯ ವಿಚಾರಣೆಗಾಗಿ ಮತ್ತು ಸಂಘಟನೆಯೊಳಗಿನ ಮನಸ್ತಾಪದ ಕುರಿತು ಚರ್ಚಿಸಿ ಸರಿ ಪಡಿಸುವ ನಿಟ್ಟಿನಲ್ಲಿ ಪಕ್ಷದ ಸೂಚನೆಯಂತೆ ಪುತ್ತೂರಿಗೆ ಆಗಮಿಸಿದ ಯತ್ನಾಳ್ ಪುತ್ತೂರು ಸಂಘ ಕಾರ್ಯಾಲಯಕ್ಕೆ ಭೇಟಿ ನೀಡಿ ಬಳಿಕ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಈಗ ಎನು ಘಟನೆ ಆಗಿದೆಯೋ ಅದನ್ನು ಮತ್ತೆ ಮತ್ತೆ ಕೆದಕುವುದಕ್ಕಿಂತ ನಾವು ಒಂದಾಗಬೇಕು. ಮುಂದೆ ಒಂದು ವರ್ಷದಲ್ಲಿ ಲೋಕಸಭೆ ಚುನಾವಣೆ ಬರಲಿದ್ದು, ಆ ಬಗ್ಗೆ ಚಿಂತಿಸಿ ಮತ್ತೆ ಒಂದಾಗಿ ಪಕ್ಷ, ಸಂಘಟನೆ, ದೇಶ ಕಟ್ಟೋಣ ಎಂದರು.
ಇನ್ನು ದಕ್ಷಿಣ ಕನ್ನಡ ಹಿಂದುತ್ವದ ಭದ್ರಕೋಟೆ. ಹಾಗಾಗಿ ಮುಂದೆ ಬರಲಿರುವ ಲೋಕಸಭಾ ಚುನಾವಣೆಗೆ ಯಾವುದೇ ರೀತಿಯಲ್ಲಿ ತೊಂದರೆ ಆಗ ಬಾರದೆಂದು ,ರಾಜ್ಯಾಧ್ಯಕ್ಷರ ಜೊತೆ ನಿನ್ನೆ ಮಾತನಾಡಿದ್ದೆ. ಅವರ ಭಾವನೆ ಹೇಳಿಕೊಂಡಿದ್ದಾರೆ. ಸುಳ್ಳು ಮಾಹಿತಿಗಳಿಂದ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ನಾನು ಹೇಗೆ ಎಲ್ಲವನ್ನು ನಿಯಂತ್ರಣ ಮಾಡಿ ಗೆದ್ದು ಬಂದಿದ್ದೇನೋ ಅದೇ ರೀತಿ ಇಲ್ಲೂ ಸಹ ಪಕ್ಷಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ, ಸಂಘಪರಿವಾರಕ್ಕೆ ಕೆಟ್ಟ ಹೆಸರು ಬಾರದ ರೀತಿಯಲ್ಲಿ ನಾವೆಲ್ಲ ಸೇರಿ ಒಂದಾಗಿ, ಮುಂದೆ ಹೋಗುವ ಎಂದು ಕಾರ್ಯಕರ್ತರಲ್ಲಿ ವಿನಂತಿ ಮಾಡುತ್ತೇನೆ ಎಂದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ್, ಸುಧೀರ್ ಶೆಟ್ಟಿ ಕಣ್ಣೂರು, ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.